ಬಿಜೆಪಿ ಪಕ್ಷ ಬಿಡುವ ಯಾವುದೇ ಆಲೋಚನೆ ಇಲ್ಲ: ಶ್ರೀರಾಮುಲು ಸ್ಪಷ್ಟನೆ

ಬಳ್ಳಾರಿ: ಬಿಜೆಪಿ ನನಗೆ ತಾಯಿ ಇದ್ದಂತೆ. ದಶಕಗಳವರೆಗೆ ನನಗೆ ಎಲ್ಲವನ್ನು ಕೊಟ್ಟು ಬೆಳೆಸಿದೆ. ಸದ್ಯಕ್ಕೆ ನನಗೆ ಪಕ್ಷ ಬಿಡುವ ಆಲೋಚನೆಯಿಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ವರಿಷ್ಠರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಗುರುವಾರ ಬಳ್ಳಾರಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾರದೋ ಒಬ್ಬರ ಆಶೀರ್ವಾದದಿಂದ ನಾನು ರಾಜಕೀಯವಾಗಿ ಬೆಳೆದಿಲ್ಲ. ನನ್ನ 40 ವರ್ಷಗಳ ರಾಜಕೀಯದಲ್ಲಿ ಸೋಲು, ಗೆಲುವು, ಅನೇಕ ಏಳು ಬೀಳುಗಳನ್ನು ಕಂಡಿದ್ದೇನೆ. ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿದ್ದೇನೆ ಎಂದು ತಿಳಿಸಿದರು.
ನಾನು ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ. ಜನಾರ್ದನ ರೆಡ್ಡಿ ಸಹಕಾರದಿಂದ ಬೆಳೆದವನಲ್ಲ. ಬಿಜೆಪಿ ನನ್ನನ್ನು ಗುರುತಿಸಿ ಬೆಳೆಸಿದೆ. ನನ್ನಲ್ಲಿ ಶಕ್ತಿ ಸಾಮರ್ಥ್ಯ ಇಲ್ಲದೇ ಹೋಗಿದ್ದರೆ ಮೊಳಕಾಲ್ಮೂರು ಹಾಗೂ ಬಾದಾಮಿಯಲ್ಲಿ ಯಾಕೆ ಟಿಕೆಟ್ ನೀಡುತ್ತಿದ್ದರು ಎಂದು ಶ್ರೀರಾಮುಲು ಹೇಳಿದರು.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನಾನೇ ಕಾರಣ ಎಂದು ನನ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅದಕ್ಕೆ ನಾನು ಸಭೆಯಲ್ಲಿ ಅವರಿಗೆ ಉತ್ತರ ಕೊಟ್ಟಿದ್ದೇನೆ ಎಂದು ಅವರು ತಿಳಿಸಿದರು.
ರಾಜ್ಯ ಬಿಜೆಪಿ ಉಸ್ತುವಾರಿ ನನ್ನ ವಿರುದ್ಧ ಆರೋಪ ಮಾಡಿದಾಗ, ಸಭೆಯಲ್ಲಿ ನನ್ನ ಪಕ್ಕ ಕುಳಿತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒಂದು ಮಾತನ್ನು ಆಡದೆ ಇದ್ದದ್ದು ನನಗೆ ಬೇಸರ ಉಂಟು ಮಾಡಿತು. ನಾನು ಯಾವತ್ತೂ ಪಕ್ಷ ವಿರೋಧಿ ಕೆಲಸ ಮಾಡಿದವನಲ್ಲ. ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೊರತುಪಡಿಸಿ ಯಾರೊಬ್ಬರೂ ನನ್ನ ಪರವಾಗಿ ಮಾತನಾಡಿಲ್ಲ ಎಂದು ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ರಾಜಕಾರಣಿಗೂ ಅವರದೇ ಆದ ಕಾರ್ಯಕರ್ತರು, ಅಭಿಮಾನಿಗಳು ಇರುತ್ತಾರೆ. ನಾನು ಕೇವಲ ಬಳ್ಳಾರಿಗೆ ಸೀಮಿತವಾಗಿಲ್ಲ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಬಿಜೆಪಿಯನ್ನು ಸಂಘಟಿಸಲು ಶ್ರಮವಹಿಸಿದ್ದೇನೆ. ಶ್ರೀರಾಮುಲು ನನ್ನಿಂದಲೆ ಬೆಳೆದದ್ದು ಎಂದು ಜನಾರ್ದನ ರೆಡ್ಡಿ ಹೇಳುವುದು ಸರಿಯಲ್ಲ. ಬಳ್ಳಾರಿಯಲ್ಲಿ ಬಿಜೆಪಿಗೆ ನೆಲೆ ಇಲ್ಲ ಎಂದು ಹೇಳುತ್ತಿದ್ದ ಕಾಲವೊಂದಿತ್ತು. ಆಗ ಬಳ್ಳಾರಿಯ 9 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಗೆಲ್ಲಲು ನನ್ನದೇ ಆದ ಶ್ರಮವಿದೆ ಎಂದು ಅವರು ಹೇಳಿದರು.