‘ಪಕ್ಷ ಬಿಡಬೇಡಿ’ ಎಂದು ವರಿಷ್ಠರು ಮನವಿ ಮಾಡಿದ್ದಾರೆ : ಬಿ.ಶ್ರೀರಾಮುಲು

ಬಿ.ಶ್ರೀರಾಮುಲು
ಬೆಂಗಳೂರು : ‘ಯಾವುದೇ ಕಾರಣಕ್ಕೂ ಪಕ್ಷ ಬಿಡಬೇಡಿ’ ಎಂದು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ವರಿಷ್ಠರು ಮನವಿ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಿನ್ನೆ ಜೆ.ಪಿ.ನಡ್ಡಾ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಕೋರ್ ಕಮಿಟಿ ಸಭೆಯಲ್ಲಿ ಉಸ್ತುವಾರಿ ರಾಧಾ ಮೋಹನ್ ಅಗರ್‍ವಾಲ್ ಅವರು ನಡೆದುಕೊಂಡ ರೀತಿಯ ಬಗ್ಗೆ ಅವರ ಗಮನಕ್ಕೆ ತಂದಿದ್ದೇನೆ. ರಾಮುಲು ನಿನ್ನ ಪರವಾಗಿ ನಾನಿದ್ದೀನಿ ಎಂದು ಅಭಯ ನೀಡಿದ್ದಾರೆ’ ಎಂದರು.
‘ಹೊಸದಿಲ್ಲಿಗೆ ಬರುವುದಾದರೆ ಬನ್ನಿ, ಹಿಂದುಳಿದ ಸಮುದಾಯದ ಪರವಾಗಿ ನೀವಿದ್ದೀರಿ, ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ನಿಮ್ಮ ಸುದ್ದಿ ಮುಟ್ಟಿಸಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಸಹಿತ ಎಲ್ಲ ಮುಖಂಡರು ತನ್ನೊಂದಿಗೆ ಮಾತನಾಡಿದ್ದಾರೆ’ ಎಂದು ರಾಮುಲು ತಿಳಿಸಿದರು.
‘ಕೋರ್ ಕಮಿಟಿ ಸಭೆಯಲ್ಲಿ ನಿಮಗೆ ನೋವಾಗಿದೆ ಎಂಬುದು ಗೊತ್ತಾಗಿದೆ. ಅಗರ್‌ವಾಲ್ ತಮ್ಮ ಮಾತು ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ. ಎಲ್ಲರಿಗೂ ನನ್ನ ಮೇಲೆ ವಿಶ್ವಾಸವಿದೆ. ನನ್ನ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಬಿಜೆಪಿಗೆ ಅಳಿಲು ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ಅದನ್ನ ಗುರುತಿಸಿ ಅವರೆಲ್ಲರೂ ಮಾತನಾಡ್ತಿದ್ದಾರೆ ಎಂದು ರಾಮುಲು ತಿಳಿಸಿದರು.
ವಿಜಯೇಂದ್ರ ದಿಲ್ಲಿಗೆ ದೌಡು: ಬಿಜೆಪಿಯಲ್ಲಿನ ಬಣ ರಾಜಕೀಯ ಹಾಗೂ ರಾಜ್ಯಾಧ್ಯಕ್ಷ ಹುದ್ದೆ ಜಟಾಪಟಿ ಬೆನ್ನಲ್ಲೇ ಬಿ.ವೈ.ವಿಜಯೇಂದ್ರ ದಿಢೀರ್ ದಿಲ್ಲಿಗೆ ತೆರಳಿದ್ದು, ಕುತೂಹಲ ಸೃಷ್ಟಿಸಿದೆ. ವಿಜಯೇಂದ್ರ ವಿರುದ್ಧ ಬಹಿರಂಗ ಸಮರ ಸಾರಿರುವ ಯತ್ನಾಳ ಬಣ, ‘ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ’ ಎಂಬ ಎಚ್ಚರಿಕೆ ನೀಡಿದ್ದು ಹೈಕಮಾಂಡ್‍ಗೆ ತಲೆನೋವು ತಂದಿಟ್ಟಿದೆ.