ʼವಕ್ಫ್ʼ ವಿಚಾರ | ವಿರೋಧದ ಮಧ್ಯೆ ಯತ್ನಾಳ್ ನೇತೃತ್ವದ ಹೋರಾಟಕ್ಕೆ ಕಂಪ್ಲಿಯಲ್ಲಿ ಚಾಲನೆ
ಬಳ್ಳಾರಿ: ಬಿಜೆಪಿಯಲ್ಲಿ ಬಣ ರಾಜಕೀಯ ಮುಂದುವರಿದಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ವಿರೋಧದ ಮಧ್ಯೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಅವರ ಬೆಂಬಲಿಗರಿಂದ ‘ವಕ್ಫ್’ಗೆ ಸಂಬಂಧಿಸಿದ ಹೋರಾಟಕ್ಕೆ ಇಲ್ಲಿನ ಕಂಪ್ಲಿಯಲ್ಲಿ ಚಾಲನೆ ನೀಡಲಾಗಿದೆ.
ಶನಿವಾರ ಜಿಲ್ಲೆಯ ಕಂಪ್ಲಿ ಪಟ್ಟಣದ ಉದ್ಭವ ಗಣಪತಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಸಣಾಪುರ ರಸ್ತೆಯ ಶಾರದಾ ಹಿರಿಯ ಪ್ರಾಥಮಿಕ ಶಾಲೆವರೆಗೆ ತಲುಪಿತು. ಪಾದಯಾತ್ರೆಯಲ್ಲಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಜೊತೆ ಗುರುತಿಸಿಕೊಂಡಿರುವ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಮಾಜಿ ಶಾಸಕ ಕುಮಾರ ಬಂಗಾರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಶಾಸಕ ಯತ್ನಾಳ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ವಕ್ಫ್ ವಿರುದ್ಧದ ಹೋರಾಟದ ಸಮಾವೇಶಕ್ಕೆ ಜಿಲ್ಲೆ ಸೇರಿದಂತೆ ಕಂಪ್ಲಿಯ ಬಿಜೆಪಿ ಜನಪ್ರತಿನಿಧಿಗಳು, ನಾಯಕರು, ಸ್ಥಳೀಯ ಮುಖಂಡರು ಸಮಾವೇಶದಿಂದ ಅಂತರ ಕಾಯ್ದುಕೊಂಡಿದ್ದು, ಮೆರವಣಿಗೆಯಲ್ಲಿ ಯತ್ನಾಳ್ ಬಣದ ನಾಯಕರು, ಬೆಂಬಲಿಗರು ಮಾತ್ರ ಭಾಗವಹಿಸಿದ್ದರು.
ಹೋರಾಟ ನಿಲ್ಲದು: ‘ಪಕ್ಷದ ವರಿಷ್ಠರು ತನ್ನನ್ನು ದಿಲ್ಲಿಗೆ ಕರೆದಿದ್ದರು. ನಾನು ಹೋಗಿ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಆದರೆ, ನನ್ನ ಹೋರಾಟವನ್ನು ನಿಲ್ಲಿಸಲು ಹೈಕಮಾಂಡ್ ನನಗೆ ಯಾವುದೇ ಸೂಚನೆ ನೀಡಿಲ್ಲ. ವಿಜಯೇಂದ್ರ ಜತೆ ನಮಗೆ ಮಾತುಕತೆ ಅಗತ್ಯವಿಲ್ಲ. ನಮ್ಮದು ಪಕ್ಷ ನಿಷ್ಠರ ಬಣ. ವಿಜಯೇಂದ್ರ ಅವರೊಂದಿಗೆ ಗುರುತಿಸಿಕೊಂಡವರೂ ಹೋರಾಟಕ್ಕೆ ಬಂದರೆ ಸ್ವಾಗತ’ ಎಂದು ಶಾಸಕ ಯತ್ನಾಳ್ ಹೇಳಿದರು.
ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ನಾನು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ನಮ್ಮ ವಿರುದ್ಧ ವರಿಷ್ಠರಿಗೆ ದೂರು ನೀಡಿರುವ ಮಾಹಿತಿಯೂ ಇಲ್ಲ. ಕಾಂಗ್ರೆಸ್‍ನ ಭಿಕ್ಷೆಯಿಂದ ಶಾಸಕರೂ ಆಗಿಲ್ಲ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಯತ್ನಾಳ್ ಇದೇ ವೇಳೆ ಸ್ಪಷ್ಟಣೆ ನೀಡಿದರು.