ವಕ್ಫ್‌ ತಿದ್ದುಪಡಿ ಕಾಯಿದೆ ವಿರೋಧಿಸಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ

Update: 2025-04-21 17:27 IST
ವಕ್ಫ್‌ ತಿದ್ದುಪಡಿ ಕಾಯಿದೆ ವಿರೋಧಿಸಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ
  • whatsapp icon

ಬಳ್ಳಾರಿ : ಮೂರು ಸಲ ಗೆದ್ದು ಪ್ರಧಾನಿಯಾಗಿರುವ ನರೇಂದ್ರ ಮೋದಿಯವರಿಗೆ ದೇಶದ ಯುವಜನರು ಅವರಿಗೆ ಪಾಠ ಕಲಿಸುವ ದಿನ ದೂರ ಇಲ್ಲ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಸೋಮವಾರ ನಗರದ ಗವಿಯಪ್ಪ (ಮೋತಿ) ವೃತ್ತದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಬಳ್ಳಾರಿ ಸಮಿತಿಯು ಏರ್ಪಡಿಸಿದ್ದ  ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿ ಹೋರಾಟದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ನೂತನ ವಕ್ಫ್ ಕಾಯ್ದೆ ವಿರೋಧಿ ಹೋರಾಟ ಕೇವಲ ಮುಸ್ಲಿಮರ ಹೋರಾಟ ಅಲ್ಲ, ಇದು ನಮ್ಮೆಲ್ಲರಿಗೆ ಸೇರಿದ ವಿಷಯ, ಹೀಗಾಗಿ ನಾವೆಲ್ಲರೂ ಸೇರಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಬಹಳಷ್ಟು ತ್ಯಾಗವಿದೆ. ಮುಸ್ಲಿಂ ಸಮುದಾಯದ ಸಾವಿರಾರು ಜನ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣ ನೀಡಿದ್ದಾರೆ, ಇಂದು ನಾವು ಹಿಂದೂ, ಕ್ರೈಸ್ತ, ದಲಿತ, ಲಿಂಗಾಯತ ಸೇರಿದಂತೆ ಎಲ್ಲ ಧರ್ಮಗಳ ಜನರು ಮುಸ್ಲಿಮರ ಹಕ್ಕುಗಳ ರಕ್ಷಣೆ ಮಾಡಲು ಇಲ್ಲಿ ಸೇರಿದ್ದೇವೆ ಎಂದರು.

ಸಿಎಎ, ಎನ್‌ಆರ್‌ಸಿ, ಹಿಜಾಬ್ ನಂತಹ ವಿಷಯ ಮುಂದಿಟ್ಟು ಮುಖ್ಯ ವಿಷಯಗಳನ್ನು ಮರೆ ಮಾಚಲಾಗುತ್ತಿದೆ, ವಕ್ಫ್ ಕಾಯ್ದೆ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಕಣೇಕಲ್ ಬಸ್ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ಭರತ್ ರೆಡ್ಡಿ ಪಾಲ್ಗೊಂಡರು.

ನಂತರ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆಯ ಮೇಲೆ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ವಕ್ಫ್ ಮಂಡಳಿಯ ಜಿಲ್ಲಾಧ್ಯಕ್ಷ ಹುಮಾಯೂನ್ ಖಾನ್, ಮೇಯರ್ ಮುಲ್ಲಂಗಿ ನಂದೀಶ್, ಎ.ಮಾನಯ್ಯ, ಖಾಜಿ ಗುಲಾಂ ಸಿದ್ದೀಕಿ, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಹುಸೇನ್ ಪೀರಾ, ಭಂ ಭಂ ದಾದಾ, ಕಣೇಕಲ್ ಮೆಹಬೂಬಸಾಬ, ಅಲ್ಲಾಬಕಷ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಪಾಲಿಕೆಯ ಸದಸ್ಯರಾದ ಜಬ್ಬಾರ್, ನೂರ್ ಮೊಹಮ್ಮದ್, ಆಸಿಫ್, ನಾಜು, ಮಿಂಚು ಸೀನಾ, ಕುಬೇರಾ, ಪೇರಂ ವಿವೇಕ್, ಗಾದೆಪ್ಪ, ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಅಯಾಜ್, ಶಿವರಾಜ್, ಬಿಆರೆಲ್ ಸೀನಾ, ಗೋವಿಂದ ಸೇರಿದಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News