ಕೊಪ್ಪಳ | ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣ : ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 97 ಮಂದಿಗೆ ಜಾಮೀನು ಮಂಜೂರು
ಕೊಪ್ಪಳ : ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 97 ಮಂದಿಗೆ ಧಾರವಾಡದ ಹೈಕೋರ್ಟ್ ಪೀಠವು ಬುಧವಾರ ಜಾಮೀನು ಮಂಜೂರು ಮಾಡಿದೆ.
ಎ1 ಆರೋಪಿ ಮಂಜುನಾಥ ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ. ಅದ್ದರಿಂದ ಅವರನ್ನು ಹೊರತು ಪಡಿಸಿ ಉಳಿದ 97 ಮಂದಿಗೆ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಕೊಪ್ಪಳ ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪತ್ರಿಯೊಬ್ಬರಿಂದ 50 ಸಾವಿರ ರೂ. ಬೆಲೆಯ ಬಾಂಡ್ ಹಾಗೂ ಒಬ್ಬರಿಂದ ಶ್ಯೂರಿಟಿ ಪಡೆದು ಜಾಮೀನು ನೀಡಲಾಗಿದ್ದು, ಇನ್ನೂ ಇದೇ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಆರೋಪಿಗಳಿಗೂ ಜಾಮೀನು ಮಂಜೂರು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಒಟ್ಟು 117 ಜನರು ಅಪರಾಧಿಗಳೆಂದು ಜಿಲ್ಲಾ ನ್ಯಾಯಾಲಯದ ಘೋಷಿಸಿತ್ತು. ಇದರಲ್ಲಿ ಕೆಲವರು ಮೃತರಾಗಿದ್ದರು. ಉಳಿದ 101 ಜನರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.
ಏನಿದು ಮರಕುಂಬಿ ಪ್ರಕರಣ:
2014ರ ಆಗಸ್ಟ್ 28ರಂದು ಗಂಗಾವತಿಯ ಚಿತ್ರಮಂದಿರವೊಂದರಲ್ಲಿ ‘ಪವರ್’ ಸಿನಿಮಾ ನೋಡಲು ಟಿಕೆಟ್ ಪಡೆಯುವಾಗ ದಲಿತರು ಹಾಗೂ ಸವರ್ಣೀಯರ ನಡುವೆ ಮಾತಿನ ಚಕಮಕಿಯು ಸಂಘರ್ಷಕ್ಕೆ ತಿರುಗಿತ್ತು.
ಈ ಪ್ರಕರಣದ ಕುರಿತು ಭೀಮೇಶ ಎಂಬುವವರು “ನಮ್ಮ ಗ್ರಾಮದ ಸವರ್ಣೀಯ ಮಂಜುನಾಥ ಈಳಿಗೇರ ಹಾಗೂ ಇತರರು ಟಿಕೆಟ್ ಪಡೆಯುವಾಗ ಯಾರೊ ವ್ಯಕ್ತಿಗಳ ಜೊತೆ ಜಗಳ ಮಾಡಿಕೊಂಡಿದ್ದರು. ಆಗ ಅವರ ಮೇಲೆ ಹಲ್ಲೆಯಾಗಿತ್ತು. ಅದನ್ನು ನಾವೇ ಮಾಡಿಸಿದ್ದೇವೆ ಎಂದು ತಪ್ಪು ತಿಳಿದುಕೊಂಡು ಮಂಜುನಾಥ ಅವರು ಗ್ರಾಮಕ್ಕೆ ಸವರ್ಣೀಯರನ್ನು ಕರೆದುಕೊಂಡು ಬಂದು ನಮ್ಮ ಸಮುದಾಯದ ಜನರ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದ್ದ. ಗ್ರಾಮದಲ್ಲಿ ಗುಡಿಸಲುಗಳಿಗೆ ಬೆಂಕಿಯನ್ನೂ ಹಚ್ಚಲಾಗಿತ್ತು” ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಂತರ ದೊಡ್ಡ ಹಿಂಸಾಚಾರವೇ ನಡೆದು, ಎರಡೂ ಗುಂಪಿನ ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ದಲಿತರಿಗೆ ಗ್ರಾಮದ ಹೋಟೆಲ್‌ಗಳಲ್ಲಿ ಪ್ರವೇಶವಿರಲಿಲ್ಲ. ಹೋಟೆಲ್‌ಗಳಲ್ಲಿ ಪ್ರತ್ಯೇಕ ಲೋಟ, ಅಂಗಡಿಗಳಲ್ಲಿ ಕ್ಷೌರ ನಿರಾಕರಣೆ, ದಿನಸಿ ಸಾಮಾನು ಕೊಡಲು ನಿರಾಕರಿಸಿದ ಘಟನೆಗಳು ಜರುಗಿದವು.
ಈ ವೇಳೆ ಹಲವು ಸಂಘಟನೆಗಳು ಮಧ್ಯಪ್ರವೇಶಿಸಿ ಮಾತುಕತೆಯಿಂದ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಬುದ್ಧಿ ಹೇಳಿದ್ದವು. ಅಧಿಕಾರಿಗಳ ದಂಡು ಗ್ರಾಮಕ್ಕೆ ಬಂದು ಶಾಂತಿ ಸಭೆ ನಡೆಸಿ ಸಂಧಾನ ಮಾಡಿ ದಲಿತರಿಗೆ ಹೋಟೆಲ್, ಕ್ಷೌರದಂಗಡಿಗಳಲ್ಲಿ ಅವಕಾಶ ಕಲ್ಪಿಸಿತು.
ಈ ಪ್ರಕರಣದ ಕುರಿತು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶದಾದ ಸಿ.ಚಂದ್ರಶೇಖರ್ ಅವರು 9 ವರ್ಷಗಳ ನಂತರ ಆರೋಪ ಸಾಬೀತು ನಿರ್ಧಾರ ಪ್ರಕಟಿಸಿದ್ದರು. 101 ಜನರ ಅಪರಾಧಿಗಳಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ, 5 ಸಾವಿರ ದಂಡ, ಇನ್ನೂ ಮೂವರು ಅಪರಾಧಿಗಳು ಕೂಡಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರಿಂದ ಜಾತಿ ನಿಂದನೆ ಕಾಯ್ದೆ ಅನ್ವಯವಾಗದ ಕಾರಣ 3 ಜನರಿಗೆ 5 ವರ್ಷ ಜೈಲು ಶಿಕ್ಷೆ, 2 ಸಾವಿರ ರೂ. ದಂಡ ವಿಧಿಸಿದ್ದರು.