ವಕ್ಫ್ ತಿದ್ದುಪಡಿ ಕಾಯ್ದೆಯ ನಂತರ ಬೌದ್ಧ, ಕ್ರಿಶ್ಚಿಯನ್ನರ ಆಸ್ತಿ ಕಬಳಿಸುವ ಹುನ್ನಾರ ಮುಂದುವರೆಯಲಿದೆ : ರಮೇಶ್ ಡಾಕುಳಗಿ

ರಮೇಶ್ ಡಾಕುಳಗಿ
ಬೀದರ್ : ವಕ್ಫ್ ಮಸೂದೆ ತಿದ್ದುಪಡಿಯ ನಂತರ ಅಲ್ಪಸಂಖ್ಯಾತ ವರ್ಗಗಳಾದ ಬೌದ್ಧ ಮತ್ತು ಕ್ರಿಶ್ಚಿಯನ್ನರ ಆಸ್ತಿ ಕಬಳಿಸುವ ಹುನ್ನಾರ ಮುಂದುವರೆಯಲಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನೆ ಸಂಚಾಲಕ ರಮೇಶ್ ಡಾಕುಳಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದ ಮುಸ್ಲಿಮರ ಎಲ್ಲಾ ಉಮ್ಮಿದ್ ಅನ್ನು ಕಸಿಯುವ ವಕ್ಫ್ ತಿದ್ದುಪಡಿ ಕಾಯ್ದೆ 2025 ಅನ್ನು ಸಂಸತ್ತಿನಲ್ಲಿ ಬಹುಮತ ಪಡೆದುಕೊಂಡು ಅವಸರವಸರಾಗಿ ರಾಷ್ಟ್ರಪತಿ ಸಹಿಯನ್ನು ಪಡೆದುಕೊಂಡು ಕಾಯ್ದೆಯಾಗಿಸಿ ಬಿಟ್ಟಿದೆ. ಇದು ಅಲ್ಪಸಂಖ್ಯಾತರ ವಿರೋಧಿ ಕ್ರಮ ಅಲ್ಲದೇ ಇಡೀ ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಕಿಡಿಕಾರಿದ್ದಾರೆ.
ಇದು ಮುಸ್ಲಿಮರ ಅಸ್ತಿತ್ವ, ಅಸ್ಮಿತೆ ಹಾಗೂ ಬದುಕುಗಳ ಮೇಲೆ ಸರ್ಕಾರ ನಡೆಸುತ್ತಿರುವ ಅಕ್ರಮಣದ ಮುಂದುವರಿಕೆಯಾಗಿದ್ದು, ಇದಕ್ಕೆ ಎಂದಿನಂತೆ ಸೋಗಲಾಡಿ ಸೆಕ್ಯುಲರ್ ಪಕ್ಷವಾದ ಜೆಡಿಎಸ್ ಅಂತಹ ಪಕ್ಷಯು ಬಿಜೆಪಿಯ ಅಕ್ರಮಣಕ್ಕೆ ಕೈಜೋಡಿಸಿದೆ. ಇದು ಮುಸ್ಲಿಮರ ಆಸ್ತಿಗಳನ್ನು ಕಸಿದುಕೊಳ್ಳುವುದರ ಜೊತೆಗೆ ಅಲ್ಪಸಂಖ್ಯಾತ ವರ್ಗಗಳಾದ ಬೌದ್ಧ ಮತ್ತು ಕ್ರಿಶ್ಚಿಯನ್ನರ ಆಸ್ತಿಗಳನ್ನು ಕಬಳಿಸುವ ಹುನ್ನಾರ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಬೌದ್ಧ ಮಹಾವಿಹಾರ ಹಿಂದುಗಳ ವಶದಲ್ಲಿದೆ. ಇತ್ತೀಚಿಗೆ ಆರೆಸ್ಸೆಸ್ ಮುಖವಾಣಿ ಪತ್ರಿಕೆಯಲ್ಲಿ ಕ್ರಿಶ್ಚಿಯನ್ ಚರ್ಚ್ ಆಸ್ತಿ ಮೇಲೆ ವರದಿ ಮಾಡಿದೆ. ಇದನ್ನು ದಲಿತ ಸಂಘರ್ಷ ಸಮಿತಿ ಉಗ್ರವಾಗಿ ಖಂಡಿಸುತ್ತದೆ. ಹಾಗೆಯೇ ಅಲ್ಪಸಂಖ್ಯಾತರ ಹೋರಾಟಕ್ಕೆ ಬೆಂಬಲ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.