ಬೀದರ್ | ಡಾ.ಅಂಬೇಡ್ಕರ್ ಅವರು ಭಾರತದ ಆರ್ಥಿಕ ಅಭಿವೃದ್ಧಿಯ ಹರಿಕಾರ : ಡಾ.ಜೈ ಭಾರತ್ ಮಂಗೇಶ್ಕರ್

ಬೀದರ್ : ಭಾರತ ದೇಶ ಇಷ್ಟೊಂದು ಆರ್ಥಿಕವಾಗಿ ಮುಂದುವರಿಯಲು ಮೂಲ ಕಾರಣ ಡಾ.ಅಂಬೇಡ್ಕರ್ ಅವರಾಗಿದ್ದಾರೆ. ಅವರು ಈ ದೇಶದ ಆರ್ಥಿಕ ಅಭಿವೃದ್ಧಿಯ ಹರಿಕಾರ ಎಂದು ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಜೈಭಾರತ್ ಮಂಗೇಶ್ಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ್ ನಲ್ಲಿ ಆಚರಿಸಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿಯಲ್ಲಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್ ಅವರು ಅದ್ಭುತವಾದ ಆರ್ಥಿಕ ಪುಸ್ತಕಗಳನ್ನು ಬರೆದಿದ್ದಾರೆ. ಭಾರತ ದೇಶದ ಆರ್ಥಿಕ ಪರಿವರ್ತನೆಗಾಗಿ ಆ ಕಾಲದಲ್ಲಿ ವಿಶೇಷವಾದಂತಹ ಆರ್ಥಿಕ ಪರಿಸ್ಥಿತಿಗಳ ಅಧ್ಯಯನ ಅವರು ಮಾಡಿದ್ದರು. ಆರ್ಥಿಕ ಅಭಿವೃದ್ಧಿಗೆ ಯಾವ ರೀತಿಯ ಕ್ರಮಗಳನ್ನು ಕೈಗೊಂಡಾಗ ಭಾರತವನ್ನು ಅಭಿವೃದ್ಧಿ ರಾಷ್ಟ್ರವಾಗಿ ಮಾಡಬಹುದು ಎಂದು ತಮ್ಮ ಅನೇಕ ಲೇಖನ ಮತ್ತು ಪುಸ್ತಕಗಳಲ್ಲಿ ಅಂಬೇಡ್ಕರ್ ಅವರು ಬರೆದಿದ್ದಾರೆ. ಈ ಪುಸ್ತಕ ಮತ್ತು ಲೇಖನಗಳಿಂದಲೇ ಈ ದೇಶವು ಅದೆಷ್ಟೋ ಆರ್ಥಿಕ ಅಭಿವೃದ್ಧಿ ಕಂಡಿದೆ ಎಂದು ತಿಳಿಸಿದರು.
ಡಾ. ರಿಜ್ವಾನಾ ಗಡ್ಕರಿ ಅವರು ಮಾತನಾಡಿ, ಸಮಾಜದಲ್ಲಿ ಅನೇಕ ನೋವುಗಳನ್ನು ಉಂಡ ಡಾ.ಅಂಬೇಡ್ಕರ್ ಅವರು ವಿಶ್ವಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಸಮಾಜ ಅವರಿಗೆ ಬಹಿಷ್ಕಾರ ಮಾಡಿದರು ಸಹ ಅವರು ಮಾತ್ರ ಭಾರತ ದೇಶಕ್ಕೆ ವಿಶ್ವದ ಅತಿ ದೊಡ್ಡ ಸಂವಿಧಾನ ಬರೆದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಪ್ರೊ.ಜಯಶ್ರೀ ಪ್ರಭಾ, ಡಾ.ಸುಮನಬಾಯಿ ಸಿಂಧೆ, ಡಾ.ರಾಜಕುಮಾರ್ ಅಲ್ಲೂರೆ, ಡಾ.ಸುಚ್ಚಿದಾನಂದ್ ಮಲ್ಕಾಪುರೆ, ನಾಗಾರ್ಜುನ್, ಅವಿನಾಶ್, ಸೋನಿಕ, ಪ್ರಕಾಶ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಕಾರ್ಯದರ್ಶಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.