ಬೀದರ್ | ಯರನಳ್ಳಿ ಗ್ರಾಮ ಪಂಚಾಯತ್ ಕಟ್ಟಡ ಹೊಸದಾಗಿ ನಿರ್ಮಿಸಲು ಗುರುನಾಥ್ ವಡ್ಡೆ ಆಗ್ರಹ

Update: 2025-04-09 19:28 IST
ಬೀದರ್ | ಯರನಳ್ಳಿ ಗ್ರಾಮ ಪಂಚಾಯತ್ ಕಟ್ಟಡ ಹೊಸದಾಗಿ ನಿರ್ಮಿಸಲು ಗುರುನಾಥ್ ವಡ್ಡೆ ಆಗ್ರಹ
  • whatsapp icon

ಬೀದರ್ : ಯರನಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದ ಕಟ್ಟಡ ಕುಸಿದಿದ್ದು, ಅದನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವಂತೆ ಸಮಾಜ ಸೇವಕ ಗುರುನಾಥ್ ವಡ್ಡೆ ಅವರು ಆಗ್ರಹಿಸಿದ್ದಾರೆ.

ಮಂಗಳವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಯರನಳ್ಳಿ ಗ್ರಾಮ ಪಂಚಾಯತ್ ಕಟ್ಟಡವು ಎರಡು ಅಂತಸ್ತಿನಲುದ್ದು, ಈ ಕಟ್ಟಡದ ಗೋಡೆಯು 2022 ರಲ್ಲಿ ಅರ್ಧ ಭಾಗ ಕುಸಿದಿದೆ. ಇದು ಯಾವುದೇ ಕ್ಷಣದಲ್ಲೂ ಸಂಪೂರ್ಣವಾಗಿ ಬೀಳಬಹುದು. ಇದರಿಂದಾಗಿ ಅದರ ಪಕ್ಕದಲ್ಲಿರುವ ಮನೆಯ ಮೇಲೆ ಕುಸಿದು ಜೀವಹಾನಿ ಸಂಭವಿಸಬಹುದು ಎಂದು ಅವರು ತಿಳಿಸಿದ್ದಾರೆ.

ಸದ್ಯಕ್ಕೆ ಗ್ರಾಮ ಪಂಚಾಯತ್ ಕಚೇರಿಯನ್ನು ಆರೋಗ್ಯ ಇಲಾಖೆಯ ಕಟ್ಟಡದಲ್ಲಿ ಸ್ಥಳಾಂತರಿಸಲಾಗಿದೆ. ಗ್ರಾಮಸ್ಥರು ಸಂಬಂಧಿತರಿಗೆ ಮನವಿ ಮಾಡಿ, ಕುಸಿಯುವ ಹಂತದಲ್ಲಿದ್ದ ಪಂಚಾಯತ್‌ ಕಟ್ಟಡ ನೆಲಸಮಗೊಳಿಸಬೇಕು ಎಂದು ವಿನಂತಿಸುತ್ತಿದ್ದಾರೆ. ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರವಾಗಿದೆ ಎಂದು ಹೇಳಿದ್ದಾರೆ.

ತಕ್ಷಣವೇ ಯರನಳ್ಳಿ ಗ್ರಾಮ ಪಂಚಾಯತ್ ಕುಸಿದ ಕಟ್ಟಡ ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ನಿರ್ಲಕ್ಷ ತೋರಿದರೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News