ಬಸವಣ್ಣನವರ ಜೊತೆ ರೇಣುಕಾಚಾರ್ಯರ ಜಯಂತಿ ಆಚರಿಸುವುದು ಇತಿಹಾಸಕ್ಕೆ ಮಾಡುವ ಬಹುದೊಡ್ಡ ದ್ರೋಹ : ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು

Update: 2025-04-13 11:50 IST
ಬಸವಣ್ಣನವರ ಜೊತೆ ರೇಣುಕಾಚಾರ್ಯರ ಜಯಂತಿ ಆಚರಿಸುವುದು ಇತಿಹಾಸಕ್ಕೆ ಮಾಡುವ ಬಹುದೊಡ್ಡ ದ್ರೋಹ : ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು
  • whatsapp icon

ಬೀದರ್ : ಕರ್ನಾಟಕ ಸರಕಾರವೇ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇಂತಹ ಮಹಾಪುರುಷರ ಜೊತೆ ಪೌರಾಣಿಕ, ಕಾಲ್ಪನಿಕ ರೇಣುಕಾಚಾರ್ಯರ ಜಯಂತಿ ಆಚರಿಸುವುದು ಇತಿಹಾಸಕ್ಕೆ ಮಾಡುವ ಬಹುದೊಡ್ಡ ದ್ರೋಹವಾಗಿದೆ ಎಂಬುದು ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರು ಮರೆಯಬಾರದು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಶರಣ ಶಂಕರ ಬಿದರಿ ಅವರು ಏ.02 ರಂದು ಒಂದು ಸುತ್ತೋಲೆ ಹೊರಡಿಸಿ, 2025 ನೇ ಸಾಲಿನಲ್ಲಿ ರೇಣುಕಾಚಾರ್ಯ, ಬಸವೇಶ್ವರ ಮತ್ತು ಎಲ್ಲ ಅಮರಗಣಂಗಳ ಜಯಂತಿ ಆಚರಿಸಲು ಆದೇಶ ನೀಡಿದ್ದಾರೆ. ಇದು ಸಮಸ್ತ ಲಿಂಗಾಯತ ಸಮಾಜಕ್ಕೆ ಆಘಾತ ಉಂಟು ಮಾಡಿದೆ ಎಂದವರು ತಿಳಿಸಿದ್ದಾರೆ.

ವಿಶ್ವಗುರು ಬಸವಣ್ಣನವರು ಜಗತ್ತು ಕಂಡ ಅಪರೂಪದ ಐತಿಹಾಸಿಕ ಮಹಾಪುರುಷರು ಎಂಬುದು ಸತ್ಯವಾಗಿದ್ದು, ಅವರ ಚಿಂತನೆಗಳು ಇಂದು ಜಗತ್ತನ್ನೇ ಬೆಳಗುತ್ತಿವೆ. ರಾಷ್ಟ್ರ, ರಾಜ್ಯ ನಾಯಕರು ಬಸವಣ್ಣನವರ ತತ್ವಾದರ್ಶಗಳು ದೇಶ ವಿದೇಶದ ವೇದಿಕೆಗಳಲ್ಲಿ ಅಭಿವ್ಯಕ್ತಗೊಳಿಸುತ್ತಿದ್ದಾರೆ. ಶರಣ ಶಂಕರ ಬಿದರಿ ಅವರು ಬಸವತತ್ವ ಅರಿತುಕೊಂಡವರು. ಅವರು ಬಸವನ ಅಭಿಮಾನಿಗಳು. ಬಸವತತ್ವದ ದಂಡನಾಯಕರಾದ ಇಳಕಲ್ ಮತ್ತು ಗದಗ ಹಿರಿಯ ಶ್ರೀಗಳ ಆತ್ಮೀಯ ಶಿಷ್ಯರಾಗಿದ್ದವರು. ಅವರು ಇಂತಹ ನಿರ್ಧಾರ ತೆಗೆದುಕೊಂಡಿರುವುದು ಇಡೀ ಲಿಂಗಾಯತ ಸಮಾಜಕ್ಕೆ ಬೇಸರ ತಂದಿದೆ. ಅವರ ಈ ನಿರ್ಧಾರ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ವಿಶ್ವಗುರು ಬಸವಣ್ಣನವರ ಜಯಂತಿಗೆ ಶತಮಾನಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ. ಇದನ್ನು ಆಚರಿಸಲು ಹರ್ಡೇಕರ ಮಂಜಪ್ಪನವರು ಮತ್ತು ಇನ್ನಿತರ ಮಹನೀಯರು ಪಡೆದಿರುವ ಪರಿಶ್ರಮ ಮರೆಯುವಂತಹದ್ದಲ್ಲ. ತಮ್ಮ ಈ ನಿರ್ಧಾರ ಅವರ ಪರಿಶ್ರಮ, ತ್ಯಾಗಕ್ಕೆ ಚ್ಯುತಿ ತರುವಂತಹದ್ದು ಎಂದು ಬೇಸರ ಹೊರಹಾಕಿದ್ದಾರೆ.

ಈಗಾಗಲೇ ರೇಣುಕಾಚಾರ್ಯರನ್ನು ನಂಬುವ ಸದ್ಭಕ್ತರು ಫಾಲ್ಗುಣ ಶುದ್ಧ ತ್ರಯೋದಶಿ ದಿನದಂದು ಅವರ ಜಯಂತಿ ಆಚರಿಸುತ್ತಿದ್ದಾರೆ. ಆದರೆ ಅದನ್ನು ಬಸವ ಜಯಂತಿಗೆ ತಳಕು ಹಾಕುವುದು ಅನೈತಿಹಾಸಿಕ ಮತ್ತು ಅಕ್ಷಮ್ಯವಾದದ್ದು. ತಮ್ಮ ಒಂದು ತಪ್ಪು ಹೆಜ್ಜೆ ಸಮಾಜದ ನೂರಾರು ವರ್ಷಗಳ ಭವಿಷ್ಯ ಕೆಡಿಸುತ್ತದೆ. ಇದು ಶರಣ ಚರಿತ್ರೆಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ನಿಮ್ಮ ಹಣೆಪಟ್ಟಿಗೆ ಅಂಟಿಕೊಳ್ಳುತ್ತದೆ. ಇದನ್ನು ಅರಿತುಕೊಂಡು, ತಿಳಿದು ತಿಳಿಯಲಾರದಕ್ಕೊ ಆದ ಈ ತಪ್ಪನ್ನು ವೀರಶೈವ-ಲಿಂಗಾಯತ ಮಹಾಸಭೆ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ತಮ್ಮ ತಪ್ಪನ್ನು ಸರಿಪಡಿಸದಿದ್ದರೆ ಭವ್ಯ ಪರಂಪರೆಯ ಇತಿಹಾಸ ಇರುವ ಲಿಂಗಾಯತ ಸಮಾಜ ನಿಮ್ಮನ್ನು ಎಂದು ಕ್ಷಮಿಸುವುದಿಲ್ಲ. ಬಸವಾಭಿಮಾನಿಗಳಾದ ಶಂಕರ ಬಿದರಿ ಅವರು ಈ ನಿರ್ಧಾರ ಹಿಂದೆ ಪಡೆಯುತ್ತಾರೆ ಎನ್ನುವ ನಂಬಿಕೆ ನಮಗಿದೆ ಎಂದು ಅವರು ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News