ಬೀದರ್ | ಕೆರೆ ತುಂಬಿಸುವ ಯೋಜನೆ ವಿಳಂಬಕ್ಕೆ ಪ್ರಭು ಚವ್ಹಾಣ್ ಆಕ್ರೋಶ
ಬೀದರ್: ಔರಾದ ತಾಲ್ಲೂಕಿನ 36 ಕೆರೆಗಳಿಗೆ ನೀರು ತುಂಬಿಸುವ 560.70 ಕೋಟಿಯ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆದು ಎರಡು ವರ್ಷಗಳಾದರೂ ಕಾಮಗಾರಿ ಆರಂಭಿಸುತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರಾಜ್ಯದ ಉಪಮುಖ್ಯಮಂತ್ರಿಗಳು, ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಕಾವೇರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರಗಳನ್ನು ಸಲ್ಲಿಸಿದ ಅವರು, ಹಿಂದೆ ನಮ್ಮ ಸರ್ಕಾರದಿಂದ ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ. ಕ್ಯಾಬಿನೆಟ್ ನಿಂದ ಅನುಮೋದನೆ ಪಡೆದು ಟೆಂಡರ್ ಕೂಡ ಆಗಿತ್ತು. ಆದರೂ ಕೆಲಸ ಆರಂಭಿಸಿಲ್ಲ ಎಂದಿದ್ದಾರೆ.
ಹಿಂದೆಯೂ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಯೋಜನೆ ಆರಂಭಿಸುವಂತೆ ಒತ್ತಾಯಿಸಿದ್ದೆ. ಆದರೆ ಯಾವುದೇ ಪ್ರಯೋಜನವಾಗದ ಕಾರಣ ಪುನಃ ಪತ್ರ ಬರೆಯಲಾಗಿದೆ. ಟೆಂಡರ್ ರದ್ದುಪಡಿಸಿರುವ ಬಗ್ಗೆ ಮಾಹಿತಿಯಿದ್ದು, ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಮಣಿದು ಔರಾದಿನ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.