‘ನೈತಿಕತೆಯೇ ಸ್ವಾತಂತ್ರ್ಯದ ಭರವಸೆ’ ರಾಷ್ಟ್ರವ್ಯಾಪಿ ಅಭಿಯಾನ: ತಸ್ಕಿಲಾ ಖಾನಂ

Update: 2024-09-04 14:37 GMT

ಬೀದರ್: ಸೆ.30ರವರೆಗೆ ಜಮಾತ್ ಇ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ ʼನೈತಿಕತೆಯೇ ಸ್ವಾತಂತ್ರ್ಯದ ಭರವಸೆ’ ಎಂಬ ವಿಚಾರ ಕುರಿತು ರಾಷ್ಟ್ರವ್ಯಾಪಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಸ್ಕಿಲಾ ಖಾನಂ ತಿಳಿಸಿದರು.

ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಇಂದು ಎಲ್ಲ ಧರ್ಮಗಳಲ್ಲಿ ಯುವತಿಯರಿಗೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದರೂ ಅದನ್ನು ಹೆಚ್ಚಾಗಿ ದುರುಪಯೋಗ ಪಡಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ಇದರಿಂದ ಮಾನವೀಯ ಮೌಲ್ಯಗಳು ಹಾಗೂ ನೈತಿಕ ಮೌಲ್ಯಗಳು ಕುಸಿಯುತ್ತಿದೆ ಎಂದು ಹೇಳಿದರು.

ದೇಶ ಸ್ವಾತಂತ್ರ್ಯವಾಗಿ 78 ವರ್ಷಗಳು ಗತಿಸಿದರೂ ಸ್ವಾತಂತ್ರ್ಯದ ನಿಜವಾದ ಪರಿಕಲ್ಪನೆ ಅರಿಯಲು ವಿಫಲರಾಗಿದ್ದೇವೆ. ಪಾಶ್ಚಿಮಾತ್ಯ ರಾಷ್ಟ್ರಗಳ ಅನುಸರಣೆಗೆ ಒಳಗಾಗಿ ಇಂದು ನಮ್ಮ ಬದುಕಿನ ಶೈಲಿ ಬದಲಾವಣೆ ಆಗಿ ನಮ್ಮ ಅಸಲಿ ಜೀವನ ವಿಧಾನವನ್ನೇ ಮರೆತಿದ್ದೇವೆ. ಇದರಿಂದ ಸಮಾಜದಲ್ಲಿ ಅತ್ಯಾಚಾರ, ಕೊಲೆ, ಶೋಷಣೆ, ವಂಚನೆ, ವ್ಯಭಿಚಾರ ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗವು ಈ ಅಭಿಯಾನದ ಮೂಲಕ ಮಾನವ ಜೀವನದ ಸುಭಿಕ್ಷೆ ಮತ್ತು ಮನೋಹರತೆ, ನೈತಿಕ ಕಟ್ಟಳೆಗಳನ್ನು ಪಾಲಿಸುವುದರಿಂದಲೇ ಸಾಧ್ಯ ಎಂಬ ಪ್ರಜ್ಞೆ ಬೆಳೆಸುವ ಸಂಕಲ್ಪವ ತೊಟ್ಟಿದೆ. ಯುವ ಪೀಳಿಗೆಯನ್ನು ಸ್ವಾತಂತ್ರ್ಯದ ತಪ್ಪು ಕಲ್ಪನೆಯಿಂದ ಜಾಗೃತಗೊಳಿಸುವುದು ಮತ್ತು ಅದರಿಂದ ರಕ್ಷಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.

ಕುರಾನ್ ಮತ್ತು ಸುನ್ನತ್‍ನ ಅರಿವನ್ನು ಉಂಟು ಮಾಡುವುದು ಹಾಗೂ ತಮ್ಮ ಜೀವನವನ್ನು ಅದರ ಮಾನದಂಡದಲ್ಲಿ ಎರಕ ಹೊಯ್ಯುವಂತೆ ಪ್ರೇರೇಪಿಸುವುದರ ಕಡೆಗೆ ಗಮನ ಹರಿಸಲಾಗುವುದು. ಈ ಮೂಲಕ ಒಂದೆಡೆ ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಮೆಚ್ಚುವಂತಹ ಜೀವನ ಸಾಗಿಸುವ ಮೂಲಕ ಯಶಸ್ಸನ್ನು ಗಳಿಸುವುದು ಹಾಗೂ ಸಮಾಜಕ್ಕಾಗಿ ಒಂದು ಅತ್ಯುತ್ತಮ ಮಾದರಿಯಾಗುವುದು ಎಂದು ಹೇಳಿದರು.

ಅಭಿಯಾನದ ಸಂದರ್ಭ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉದಾಹರಣೆಗೆ ಧರ್ಮದಲ್ಲಿ ನೈತಿಕತೆಯ ಕಲ್ಪನೆ ಶೀರ್ಷಿಕೆಯಲ್ಲಿ ಅಂತರ್ ಧರ್ಮಿಯ ವಿಚಾರಗೋಷ್ಟಿ, ಮಹಿಳಾ ಸಮಾವೇಶ ಶಾಲಾ-ಕಾಲೇಜುಗಳಲ್ಲೂ ಉಪನ್ಯಾಸ, ವೈಯಕ್ತಿಕ ಭೇಟಿ, ಸಮಾಜದ ಪ್ರಸಿದ್ಧ ವ್ಯಕ್ತಿಗಳ ಸಂದರ್ಶನ ನಡೆಸುವುದು, ಅದರ ಪ್ರಮುಖ ಅಂಶಗಳನ್ನು ಆಯ್ದು ಸಾಮಾಜಿಕ ಮಾಧ್ಯಮದ ಮೂಲಕ ಪ್ರಚಾರಮಾಡುವುದು. ಲೇಖನ, ಭಾಷಣ ಸ್ಪರ್ಧೆ, ಪೋಸ್ಟರ್ ಡಿಸೈನಿಂಗ್ ಹೀಗೆ ಮುಂತಾದವುಗಳ ಸ್ಪರ್ಧೆಗಳನ್ನು ನಡೆಸಲಾಗುವುದು. ಸಮುದಾಯದ ಯುವತಿಯರಲ್ಲಿ ಇದರ ಅಧ್ಯಯನ ಮತ್ತು ಅದರ ಬಗ್ಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುವುದು.

ಕರ್ನಾಟಕದಲ್ಲಿ ಈ ಅಭಿಯಾನದ ಉದ್ಘಾಟನೆಯು ಸೆ. 6ರಂದು ನೆರವೇರಲಿದೆ. ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾ. ಮಹಮ್ಮದ್ ಬೆಳಗಾವಿ ಅಧ್ಯಕ್ಷತೆ ವಹಿಸಲಿರುವರು. ರಾಜ್ಯದ ಇತರ ನಗರಗಳಾದ ಬೆಳಗಾವಿ, ಭಟ್ಕಳ, ಮಂಗಳೂರು, ಉಡುಪಿ, ಕೊಪ್ಪಳ, ರಾಯಚೂರು, ಗುಲ್ಬರ್ಗ ಮುಂತಾದ ಕಡೆಗಳಲ್ಲಿ ಜಮಾಅತೆ ಇಸ್ಲಾಮಿ ಕರ್ನಾಟಕ ರಾಜ್ಯ ಮಹಿಳಾ ವಿಭಾಗ ಅಭಿಯಾನದ ವಿವರಣೆ ಮತ್ತು ಪ್ರಚಾರಕ್ಕಾಗಿ ಪತ್ರಿಕಾಗೋಷ್ಠಿ ನಡೆಸಿಕೊಡುವರು ಎಂದು ತಸ್ಕಿಲಾ ಖಾನಂ ತಿಳಿಸಿದರು.

ಶಾಹಿನ್ ಕಾಲೇಜಿನ ಪ್ರಾಚಾರ್ಯೆ ಅಫ್ರನಾಝ್ ಮಾತನಾಡಿ, ಇತ್ತೀಚೆಗೆ ನಾವು ದೇಶದಾದ್ಯಂತ 78ನೇ ಸ್ವಾತಂತ್ರೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಿದೆವು. ಆದರೆ ದೇಶದ ಜನತೆಗೆ ಸ್ವಾತಂತ್ರ್ಯದೊರಕಿದೆಯೇ? ಸಾಮಾಜಿಕ ಸ್ಥಿತಿ ಮತ್ತು ಸಮೂಹದಲ್ಲಿ ಎಷ್ಟರ ಮಟ್ಟಿಗೆ ಸ್ವಾ ತಂತ್ರ್ಯದ ಕಲ್ಪನೆಯು ಕಾಣಸಿಗುತ್ತದೆ ಎಂಬುದರ ಕುರಿತು ಆಲೋಚಿಸಬೇಕಾದ ಅಗತ್ಯವಿದೆ. ಮಾನವ ಹಕ್ಕುಗಳ ಘೋಷಣೆಯ ಪ್ರಕಾರ ಸ್ವಾತಂತ್ರ್ಯದ ವ್ಯಾಖ್ಯಾನದಲ್ಲಿ ಅದು ಯಾರಿಗೂ ಹಾನಿಕರ ಆಗಿರಬಾರದು ಎಂಬ ಅಂಶವು ಸೇರಿದೆ. ಪ್ರಸಕ್ತ ಸಮಾಜವು ಅನೇಕ ರೀತಿಯ ಸಮಸ್ಯೆಗಳಲ್ಲಿ ತೊಳಲಾಡುತ್ತಿದೆ ಎಂಬುದನ್ನು ನಾವು ಕಾಣುತ್ತಿದ್ದೇವೆ. ಸಾಮ್ರಾಜ್ಯಶಾಹಿ ಶಕ್ತಿಗಳು ಸಾಂಸ್ಕೃತಿಕ ಮತ್ತು ಆರ್ಥಿಕ ನೆಲೆಯಲ್ಲಿ ಮಾನವರ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಆರ್ಥಿಕ ಗುಲಾಮರನ್ನಾಗಿ ಮಾಡಿದೆ. ಜೀವನದ ಮಟ್ಟ, ಸಮಾನತೆ ಇತ್ಯಾದಿಗಳ ಹೆಸರಿನಲ್ಲಿ ಕೊಳ್ಳುಬಾಕತೆಯ ಬಲೆಯಲ್ಲಿ ಬೀಳಿಸಿ ಅವರನ್ನು ದೈಹಿಕವಾಗಿ, ಮಾನಸಿಕವಾಗಿ ಗುಲಾಮರನ್ನಾಗಿ ಮಾಡಲಾಗಿದೆ ಎಂದರು.

ಬಂಡವಾಳಶಾಹಿ ಶಕ್ತಿಗಳ ಯೋಜನೆಗಳು ಸಮಾನತೆ ಮತ್ತು ಸ್ವಾತಂತ್ರ್ಯದ ಜಾಡಿನಲ್ಲಿ ಆಧುನಿಕ ಯುಗವನ್ನು ದಾರಿ ತಪ್ಪಿಸಿದೆ ಮೊಬೈಲ್ ಫೋನ್, ಇಂಟರ್ನೆಟ್, ಫೇಸ್ಟುಕ್, ಇಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಅಶ್ಲೀಲತೆಯು ಸಾಮಾನ್ಯವಾಗಿ ಬಿಟ್ಟಿದೆ ಎಂದವರು ಹೇಳಿದರು.

ಸಮಾಜದಲ್ಲಿ ಜಾಗೃತಿ ಮೂಡಿಸಲು ಮತ್ತು ಪ್ರಸಕ್ತ ಸ್ಥಿತಿಯಲ್ಲಿ ಸುಧಾರಣೆ ತರಲು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗವು ದೇಶದಾದ್ಯಂತ ಒಂದು ತಿಂಗಳ ಅಭಿಯಾನ ಆಯೋಜಿಸುವ ತೀರ್ಮಾನ ಕೈಗೊಂಡಿದೆ. ಸೆ. 1ರಿಂದ 30ರ ವರೆಗೆ ನೈತಿಕತೆಯೇ ಸ್ವಾತಂತ್ರ್ಯ ಎಂಬ ಧೇಯ ವಾಕ್ಯದಡಿ ಪ್ರಸ್ತುತ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.

ಸಂಘಟನೆಯ ಜಿಲ್ಲಾ ಸಂಚಾಲಕಿ ತೌಹಿದ್ ಶಿಂಧೆ ಮಾತನಾಡಿ, ಈ ರಾಷ್ಟ್ರವ್ಯಾಪಿ ಅಭಿಯಾನದಡಿ ಬೀದರ್ ಜಿಲ್ಲೆಯಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಉದ್ಘಾಟನಾ ಕಾರ್ಯಕ್ರಮ, ಪತ್ರಿಕಾ ಗೋಷ್ಟಿ, ಮಹಿಳೆಯರೊಂದಿಗೆ ಭೇಟಿ, ಸಾಮಾಜಿಕ ಕಾರ್ಯಕರ್ತರ ಭೇಟಿ, ಮೊಹಲ್ಲಾಗಳಲ್ಲಿ ಟೀ ಪಾರ್ಟಿ, ಪದವಿ ಕಾಲೇಜು, ಬ್ರಿಮ್ಸ್, ಆಲ್ ಅಮೀನ್, ಶಾಹೀನ್, ಅಕ್ಕ ಮಹಾದೇವಿ ಮತ್ತು ನರ್ಸಿಂಗ್ ಕಾಲೇಜುಗಳಲ್ಲಿ ಚರ್ಚಾಗೋಷ್ಠಿ, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಭೇಟಿ, ಕುಟುಂಬ ಸ್ನೇಹ ಮಿಲನ್, ಮಕ್ಕಳ‌ ಕಾರ್ಯಕ್ರಮ, ನೈತಿಕ ಮೌಲ್ಯಗಳು ವಿಷಯದ ಮೇಲೆ ಪೋಸ್ಟರ್ ತಯ್ಯಾರಿಸುವ ಸ್ಪರ್ಧೆ, ಭಾಷಣ ಸ್ಪರ್ಧೆ, ಪೆನಲ್ ಚರ್ಚೆ, ಮುಹಮ್ಮದ್ ಅತ್ಯುನ್ನತ ಚಾರಿತ್ರ್ಯವಂತ ವಿಷಯದ ಸ್ಪರ್ಧೆ, ಪ್ರತಿನಿತ್ಯ ಡಿಜಿಟಲ್ ಪೋಸ್ಟರ್ ತಯಾರಿಸಿ ಜನರಿಗೆ ಕಳುಹಿಸುವುದು, ಹಳ್ಳಿಗಳಿಗೆ ಭೇಟಿ ಜನಜಾಗೃತಿ ಮೂಡಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಂಘಟನೆಯ ನಗರ ಘಟಕದ ಅಧ್ಯಕ್ಷೆ ಸೈಯ್ಯದಾ ಉಮ್ಮ ಹಬೀಬಾ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.




 



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News