ಬೀದರ್ | ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿ.ಟಿ.ರವಿ ಪ್ರತಿಕೃತಿ ದಹಿಸಿ ಪ್ರತಿಭಟನೆ

Update: 2024-12-23 12:33 GMT

ಬೀದರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಪ್ರತಿಕೃತಿ ದಹಿಸುವ ಮೂಲಕ ಸಮಾನ ಮನಸ್ಕರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಸೋಮವಾರ ಹುಮನಾಬಾದ ಪಟ್ಟಣದ ಐಬಿ ಕಚೇರಿಯಿಂದ ಪ್ರಮುಖ ಬೀದಿಗಳ ಮೂಲಕ ಕೇಂದ್ರ ಸರಕಾರ, ಅಮಿತ್ ಶಾ ಮತ್ತು ಸಿ.ಟಿ.ರವಿ ಅವರ ವಿರುದ್ಧ ಘೋಷಣೆಗಳು ಕೂಗುತ್ತಾ ಅಂಬೇಡ್ಕರ್ ಪ್ರತಿಮೆ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಅಮಿತ್ ಶಾ ಅವರು ಸಂಸತ್ತಿನಲ್ಲಿ ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಅಂಬೇಡ್ಕರ್ ಅವರ ಹೆಸರು ಹೇಳುವುದಕ್ಕೂ ಲಾಯಕ್ಕಿಲ್ಲ. ಅಂಬೇಡ್ಕರ್ ಅವರು ಸಂವಿಧಾನ ಬರೆದು ಇಡೀ ದೇಶದ ಜನರಿಗೆ ಸಮಾನತೆ ಸಾರಿದ ಮಹಾನ್‌ ವ್ಯಕ್ತಿಯಾಗಿದ್ದಾರೆ. ಅವರಿಗೆ ಅವಹೇಳನ ಮಾಡಿದ ಅಮಿತ್ ಶಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಲಾಯಿತು.

ಸಿ.ಟಿ ರವಿ ಅವರು ಹೆಣ್ಣುಮಕ್ಕಳನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಹೆಣ್ಣುಮಕ್ಕಳನ್ನು ಕೀಳಾಗಿ ನೋಡುವ ಇವರ ಮನೆಯಲ್ಲಿನ ಹೆಣ್ಣುಮಕ್ಕಳು ಕೂಡ ಜಾಗೃತರಾಗಿರಬೇಕಾಗಿದೆ. ಆಕಳನ್ನು ಮಾತೇ ಎನ್ನುವ ಇವರು ಹೆಣ್ಣುಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಸಿ.ಟಿ.ರವಿ ಅವರು ನಾಲಿಗೆ ಬಿಗಿ ಹಿಡಿದು ಮಾತಾಡಬೇಕು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶಶಿಕಾಂತ್ ಡಾಂಗೆ, ಪ್ರಭು ಸಂತೋಷಕರ್, ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಗೌಸೊದ್ದೀನ್, ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷ ರೇಷ್ಮಾ ಹಂಸರಾಜ್, ಅಂಬುಬಾಯಿ ಮಾಳಗೆ, ಇಸಾಮೋದ್ದಿನ್ ಮಿರಸಾಬ್, ಬಸವರಾಜ್ ಮಾಳಗೆ, ಗೌತಮ್ ದೊಡ್ಡಿ, ಶ್ರೀಮಂತ್, ನಬಿಸಾಬ್, ಜೈಭೀಮ್, ಯುವರಾಜ್ ಐಹೊಳ್ಳಿ ಮತ್ತು ಎಂ.ಡಿ.ಮೊಹಮ್ಮದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News