ಬೀದರ್ | ಅಮಿತ್ ಶಾ ರಾಜೀನಾಮೆಗೆ ದಲಿತ ಸಂಘರ್ಷ ಸಮಿತಿ ಒತ್ತಾಯ
ಬೀದರ್ : ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಡಿ.21 ರಂದು ಭಾಲ್ಕಿಯ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಮುಖಂಡರು, ಅಮಿತ್ ಶಾ ಅವರು ರಾಜ್ಯಸಭೆ ಸಂಸತ್ತಿನಲ್ಲಿ ಡಾ.ಅಂಬೇಡ್ಕರ್ ಅವರ ಬಗ್ಗೆ ಅತ್ಯಂತ ಅವಮಾನಕರವಾಗಿ ಮಾತನಾಡಿದ್ದಾರೆ. ಅವರ ಮಾತುಗಳು ಅಂಬೇಡ್ಕರ್ ಮತ್ತು ಸಂವಿಧಾನವನ್ನು ಗೌರವಿಸುವುದಿಲ್ಲ ಎನ್ನುವುದು ಸಾಬಿತುಪಡಿಸುತ್ತದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಾತನಾಡುವ ವೇಳೆ ಡಾ.ಅಂಬೇಡ್ಕರ್ ಅವರ ಹೆಸರು ಹೇಳುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದರ ಬದಲು ಬೇರೆ ದೇವರ ಹೆಸರು ಹೇಳಿದರೆ ಏಳೇಳು ಜನ್ಮದುದ್ದಕ್ಕೂ ಸ್ವರ್ಗ ಸಿಗುತಿತ್ತು ಎಂದು ಹೇಳಿ ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ್ದಾರೆ. ಅವರು ತಕ್ಷಣವೇ ರಾಜೀನಾಮೆ ನೀಡದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಡಿ ಎಸ್ ಎಸ್ ಅಧ್ಯಕ್ಷ ರಾಜಭೂಷಣ್ ಭಾಟಸಾಂಗವಿಕರ್, ಬಾಬುರಾವ್ ಪಾಸ್ವಾನ್, ತಾಲೂಕು ಸಂಚಾಲಕ ರವೀಂದ್ರ ಗೌಂಡೆ, ತಾಲೂಕು ಸಂಚಾಲಕ ಶಿವಕುಮಾರ್ ಮೇತ್ರೆ, ಮಾದಾರ ಚೆನ್ನಯ್ಯ ಜಿಲ್ಲಾ ಸಮಿತಿಯ ಅಧ್ಯಕ್ಷ ಸಂಜು ಲಂಜವಾಡ, ಸುನಿಲ್ ಸಂಗೋಳಗಿ, ಸುರೇಶ್ ನಾವದಗಿ, ಓಂಕಾರ್ ಪ್ಯಾಗೆ, ಸತೀಶ್ ಮಾನೆ, ಸುಂದರರಾಜ್ ಭಾವಿಕಟ್ಟೆ, ರಾಜಕುಮಾರ್ ಹುಪಳಾ, ದತ್ತಾತ್ರೇಯ ಸಾದರಗಾಂವೆ ಮತ್ತು ಧನರಾಜ್ ಸಿಂಧೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.