ಬೀದರ್ | ಗುಡುಪಳ್ಳಿ ಗ್ರಾ.ಪಂಗೆ ಬಿಹಾರದ ಅಧಿಕಾರಿಗಳ ತಂಡ ಭೇಟಿ
ಬೀದರ್ : ಔರಾದ್ ತಾಲ್ಲೂಕಿನ ಗುಡುಪಳ್ಳಿ ಗ್ರಾಮ ಪಂಚಾಯತ್ ಗೆ ಗುರುವಾರ ಬಿಹಾರದ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ಹಾಗೂ ಅಲ್ಲಿಯ ಸ್ಥಳೀಯ ಜನಪ್ರತಿನಿಧಿಗಳ ತಂಡ ಭೇಟಿ ನೀಡಿ ಇಲ್ಲಿನ ಕೆಲಸ ಕಾರ್ಯಗಳನ್ನು ವಿಕ್ಷಿಸಿದರು.
ಹೈದರಾಬಾದ್ನ ಎನ್ಐಆರ್ಡಿ ಅಧಿಕಾರಿ ಅರುಣರಾಜ್, ಶಿವಪುತ್ರ, ರಾಜು ಅವರಿದ್ದ 40 ಜನರ ತಂಡವು ಗುಡುಪಳ್ಳಿ ಗ್ರಾಮ ಪಂಚಾಯತನಲ್ಲಿ ಕೈಗೊಂಡ ಕಾಮಗಾರಿಗಳನ್ನು ವೀಕ್ಷಿಸಿದರು.
ಗ್ರಾಮ ಪಂಚಾಯತ್ ಕಚೇರಿ ಕಟ್ಟಡ, ಗ್ರಾಮ ಪಂಚಾಯತ್ ಉದ್ಯಾನವನ, ಸೋಲಾರ್ ಬೆಳಕಿನ ವ್ಯವಸ್ಥೆ, ಡಿಜಿಟಲ್ ಗ್ರಂಥಾಲಯ, ಗ್ರಾಮದ ಶಾಲೆ, ಸ್ಥಳೀಯ ಪರಿಸರ, ಸ್ವಚ್ಛತೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಪರಿಶೀಲನೆ ಮಾಡಿ, ಸರಕಾರದ ಅನುದಾನ ಬಳಸಿಕೊಂಡು ಉತ್ತಮ ಕೆಲಸ ಮಾಡಿರುವುದಕ್ಕೆ ಗುಡುಪಳ್ಳಿ ಗ್ರಾಮ ಪಂಚಾಯಿತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ನಮ್ಮ ಪಂಚಾಯತ್ ಗೆ ಬಿಹಾರ ರಾಜ್ಯದ ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಹಾಗೂ ಅಲ್ಲಿಯ ಸ್ಥಳೀಯ ಜನಪ್ರತಿನಿಧಿಗಳ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿರುವುದು ಅತೀವ ಸಂತೋಷದ ಸಂಗತಿಯಾಗಿದೆ ಎಂದು ಗ್ರಾಮ ಪಂಚಾಯತ್ ಪಿಡಿಒ ಸಂತೋಷ್ ಪಾಟೀಲ್ ಹರ್ಷ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಜಿ.ಪಂ ಸಹಾಯಕ ನಿರ್ದೇಶಕ ಜಯಪ್ರಕಾಶ್ ಚೌಹಾಣ್, ತಾ.ಪಂ ಇಒ ಮಾಣಿಕರಾವ್ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಗ್ರಾ.ಪಂ. ಅಧ್ಯಕ್ಷೆ ಶಕುಂತಲಾ ರವೀಂದ್ರ ರೆಡ್ಡಿ, ಉಪಾಧ್ಯಕ್ಷೆ ಪಿಂಕುಬಾಯಿ ಕೇಶಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.