ಅಂಬೇಡ್ಕರ್ ನಿಂದಿಸಿದ ಅಮಿತ್ ಶಾಗೆ ಸಚಿವರಾಗುವ ನೈತಿಕತೆ ಇಲ್ಲ: ಸಂಸದ ಸಾಗರ್ ಖಂಡ್ರೆ

Update: 2024-12-23 16:23 GMT

ಬೀದರ್: ಸಂವಿಧಾನದ ಮೂಲಕ ವಂಚಿತರಿಗೆ, ಶೋಷಿತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನ ಮಾಡಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದು ಬೀದರ್ ಸಂಸದ ಸಾಗರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶತ ಶತಮಾನಗಳಿಂದ ಅಸ್ಪೃಶ್ಯತೆಯ ನೋವುಂಡು, ಸಾಮಾಜಿಕ ನ್ಯಾಯ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತಿತರ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ, ಶೋಷಿತರಾಗಿ ದೌರ್ಜನ್ಯಕ್ಕೆ ಒಳಗಾಗಿ ಚಾತುರ್ವರ್ಣಾಶ್ರಮ ವ್ಯವಸ್ಥೆಯಲ್ಲಿ ನೊಂದು ಬೆಂದವರಿಗೆ ಸಾಮಾಜಿಕ ನ್ಯಾಯ ಕೊಟ್ಟ ಪುಣ್ಯ ಪುರುಷನ ಜಪ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಾತನಾಡುವ ವೇಳೆ ‘ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಅನ್ನೋದು ಈಗ ಕೆಲವರಿಗೆ ಫ್ಯಾಶನ್ ಆಗಿದೆ. ಇಷ್ಟು ಬಾರಿ ದೇವರ ನಾಮ ಜಪಿಸಿದ್ದರೆ ಏಳು ಜನ್ಮಗಳ ವರೆಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು’ ಎಂದು ಹೇಳುವ ಮೂಲಕ ಅಂಬೇಡ್ಕರ್ ಮತ್ತು ಅವರ ಎಲ್ಲ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾರೆ ಎಂದು ಸಾಗರ್ ಖಂಡ್ರೆ ಕಿಡಿಗಾರಿದ್ದಾರೆ.

ಬಿಜೆಪಿ ಮತ್ತು ಅದರ ನಾಯಕರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಮನುವಾದಿ ನೀತಿ ಅನುಸರಿಸುವ ಅವರು ದಮನಿತರನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಅಮಿತ್ ಶಾ ಅವರ ಈ ಮಾತುಗಳು ಬಿಜೆಪಿ ಭಾವನೆಗೆ ಕೈಗನ್ನಡಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸಂವಿಧಾನವು ಸಮಾನತೆ, ಸ್ವಾತಂತ್ರ್ಯ ಮತ್ತು ಸಹಬಾಳ್ವೆಗೆ ಒತ್ತು ನೀಡುತ್ತದೆ. ಆದರೆ, ಬಿಜೆಪಿ ಸರಕಾರದ ಧೋರಣೆಗಳು ಈ ತತ್ವಗಳಿಗೆ ತದ್ವಿರುದ್ಧವಾಗಿದೆ. ಹೀಗಾಗಿಯೇ ಬಿಜೆಪಿ ನಾಯಕರು ಪದೇ ಪದೇ ಸಂವಿಧಾನ ಬದಲಿಸುವ ಮಾತನಾಡುವುದು ಎಂದು ಸಾಗರ್ ಖಂಡ್ರೆ ಹೇಳಿದ್ದಾರೆ.

ಅಮಿತ್ ಶಾ ರಾಜೀನಾಮೆ ಮತ್ತು ಕ್ಷಮೆಯಾಚನೆಗೆ ಆಗ್ರಹ: ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಅಮಿತ್ ಶಾ ತಕ್ಷಣವೇ ಗೃಹ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ಅಸಭ್ಯ ಹೇಳಿಕೆಗಾಗಿ ದೇಶದ ಮುಂದೆ ಅವರು ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕೆಂದು ಸಾಗರ್ ಖಂಡ್ರೆ ಒತ್ತಾಯಿಸಿದ್ದಾರೆ.

ಸಂವಿಧಾನಶಿಲ್ಪಿಗೆ ನೇರವಾಗಿ ಮತ್ತು ಆ ಮೂಲಕ ಸಂವಿಧಾನಕ್ಕೆ ಪರೋಕ್ಷವಾಗಿ ಘೋರ ಅವಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಷ್ಟ್ರಪತಿ ಕೂಡಲೆ ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News