ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ನಾಳೆ ಪ್ರತಿಭಟನೆ : ಉಮೇಶ್ ಸ್ವಾರಳ್ಳಿಕರ್
ಬೀದರ್: ಡಾ.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ನಾಳೆ(ಡಿ.24) ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿ ಶಾಂತಿಯುತ ಪ್ರತಿಭಟನೆ ನಡೆಸಲಿದೆ ಎಂದು ಸಮಿತಿಯ ಅಧ್ಯಕ್ಷ ಉಮೇಶ್ ಸ್ವಾರಳ್ಳಿಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 11 ಗಂಟೆಗೆ ನಗರದ ಜನವಾಡ ರಸ್ತೆ ಬಳಿ ಇರುವ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅಮಿತ್ ಶಾ ಮಾತಿನಿಂದ ದೇಶದ ಅಂಬೇಡ್ಕರ್ ಅನುಯಾಯಿಗಳಿಗೆ ಸಾಕಷ್ಟು ನೋವಾಗಿದೆ. ಅಂಬೇಡ್ಕರ್ ಬಗ್ಗೆ ಪ್ರಧಾನಿಗಳಿಗೆ ಅಭಿಮಾನ ಇದ್ದರೆ ಕೂಡಲೇ ಅಮಿತ್ ಶಾ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಗೌರವ ಅಧ್ಯಕ್ಷ ರಾಜಕುಮಾರ್ ಮೂಲಭಾರತಿ ಮಾತನಾಡಿ, ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯ ಜನ ಭಾಗವಹಿಸಬೇಕು. ಆ ಮೂಲಕ ಅಂಬೇಡ್ಕರ್ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರೆ ಏನಾಗುತ್ತದೆ ಎಂಬ ಎಚ್ಚರಿಕೆ ನೀಡಬೇಕು ಎಂದರು.
ಸಮಿತಿಯ ಪ್ರಾಧಾನ ಕಾರ್ಯದರ್ಶಿ ಮಹೇಶ್ ಗೋರನಾಳಕರ್ ಮಾತನಾಡಿ, ಈ ಹೋರಾಟ ಕೇವಲ ದಲಿತರಿಗೆ ಸೀಮಿತವಾಗಬಾರದು. ಎಲ್ಲಾ ಸಮುದಾಯದ ಜನ ಹೋರಾಟದಲ್ಲಿ ಭಾಗಿಯಾಗಬೇಕು. ಏಕೆಂದರೆ ಸಂವಿಧಾನ ಕೇವಲ ದಲಿತರಿಗೆ ಮಾತ್ರ ಹಕ್ಕು ಕೊಟ್ಟಿಲ್ಲ. ಮಾತದಾನದ ಹಕ್ಕು ಪಡೆದ ಪ್ರತಿಯೊಬ್ಬರೂ ಈ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಕರೆ ಕೊಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ವಿಷ್ಣುವರ್ಧನ್ ವಾಲದೊಡ್ಡಿ, ಉಪಾಧ್ಯಕ್ಷ ಅಂಬರೇಶ್ ಕುದರೆ, ಸಂಜುಕುಮಾರ್ ಭೋಸ್ಲೆ, ರಾಜಕುಮಾರ್ ಗುನ್ನಳ್ಳಿ, ಕಾರ್ಯದರ್ಶಿ ಪವನ್ ಮಿಠಾರೆ, ಅಂಬೇಡ್ಕರ್ ಬೌದ್ಧೆ, ವಿಶಾಲ ಹೊನ್ನಾ, ಸಂಘಟನಾ ಕಾರ್ಯದರ್ಶಿ ರಾಹುಲ್ ಡಾಂಗೆ ಹಾಜರಿದ್ದರು.