ಬೀದರ್ | ನೀರು ಕುಡಿಯಲು ಹೋಗಿ ಕಾಲುವೆಗೆ ಬಿದ್ದು ಯುವಕ ಮೃತ್ಯು
Update: 2024-12-24 13:30 GMT
ಬೀದರ್ : ನೀರು ಕುಡಿಯಲು ಹೋದ ಯುವಕನೊಬ್ಬ ಕಾಲು ಜಾರಿ ಬಿದ್ದು ಕಾರಂಜಾ ಕಾಲುವೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾಲ್ಕಿಯ ವಳಸಂಗ್ ಗ್ರಾಮದ ಹತ್ತಿರ ನಡೆದಿದೆ.
ಕಮಠಾಣದ ನಿವಾಸಿ ಶಿವಕುಮಾರ್ (24) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ.
ಮೃತ ಯುವಕ ಡಿ.22 ರಂದು ಭಾಲ್ಕಿಯ ಬೀರಿ (ಬಿ) ಗ್ರಾಮದಲ್ಲಿ ತೊಟ್ಟಿಲು ಕಾರ್ಯಕ್ರಮಕ್ಕೆ ಬಂದಿದ್ದ ಎನ್ನಲಾಗಿದೆ. ಇಂದು ತನ್ನ ಸ್ವಂತ ಗ್ರಾಮವಾದ ಕಮಠಾಣಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ನೀರು ಕುಡಿಯಲು ಗೆಳೆಯರ ಜೊತೆ ಕಾರಂಜಾ ಕಾಲುವೆಗೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕನ ಅಣ್ಣನಾದ ಸೂರಜ್ ನೀಡಿದ ದೂರಿನ ಮೇರೆಗೆ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.