ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮಿಗಳು ಕಡಿಮೆ ಉತ್ಪಾದನಾ ವೆಚ್ಚದ ಬಗ್ಗೆ ಹೆಚ್ಚಿನ ಗಮನ ನೀಡಬೇಕು : ಶಿಲ್ಪಾ ಶರ್ಮಾ
ಬೀದರ್ : ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮಿಗಳು ನೂತನ ತಾಂತ್ರಿಕತೆ ಬಳಸುವುದರ ಮೂಲಕ ಮಾರುಕಟ್ಟೆ ಸ್ಪರ್ಧೆ, ಕಡಿಮೆ ಉತ್ಪಾದನಾ ವೆಚ್ಚ ಹಾಗೂ ಉತ್ತಮ ಗುಣಮಟ್ಟದ ಉತ್ಪಾದನೆಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಹೇಳಿದರು.
ಮಂಗಳವಾರ ನಗರದ ನಾವದಗೇರಿಯ ಚಿಕ್ಕಪೇಟೆ ಹತ್ತಿರವಿರುವ ಮಸ್ಟಿಫ್ ಸೆಲೆಕ್ಟ್ ಹೋಟೆಲ್ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ʼಲೀನ್ ಯೋಜನೆ ಮತ್ತು ಝಡ್.ಇ.ಡಿ. ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮʼ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಉದ್ಯಮಕ್ಕೆ ಕಚ್ಚಾ ವಸ್ತು ಮುಖ್ಯ. ಕಚ್ಚಾ ವಸ್ತು ದೊರೆಯುವ ಸ್ಥಳದ ಅಂತರ ಹಾಗೂ ಸಾಗಾಟದ ವೆಚ್ಚ ಸಹ ಅತೀ ಮಹತ್ವವಾಗಿರುತ್ತದೆ. ಉತ್ಪಾದನಾ ವೆಚ್ಚಗಳನ್ನು ವಿವಿಧ ಹಂತಗಳಲ್ಲಿ ಕಡಿಮೆಗೊಳಿಸುವ ಬಗ್ಗೆ ಗಮನವಿರಬೇಕು. ಸಮಯದ ಉಳಿತಾಯ, ಕಾರ್ಮಿಕರ ಲಭ್ಯತೆ, ತಾಂತ್ರಿಕತೆಯ ವೆಚ್ಚಗಳನ್ನು ಸೇರಿ ಒಟ್ಟಾರೆಯಾಗಿ ಮಾರುಕಟ್ಟೆಯ ಸ್ಪರ್ಧೆಯಲ್ಲಿ ಉತ್ತಮ ಉತ್ಪನ್ನಗಳನ್ನು ನೀಡಲು ಉದ್ಯಮಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಆರಂಭಿಸುವವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸಾಲ ಹಾಗೂ ಕಡಿಮೆ ಬಡ್ಡಿ ಸಹಾಯಧನ ಇದೆ. ಗಡಿ ಹಾಗೂ ಸಣ್ಣ ಕೈಗಾರಿಕೆ ಘಟಕಗಳ ವಿಸ್ತರಣೆಗೆ ಆಧುನಿಕರ ತಾಂತ್ರಿಕ ಉನ್ನತೀಕರಣಕ್ಕೆ ವಿವಿಧ ಸೌಲಭ್ಯಗಳು ಲಭ್ಯವಿದ್ದು, ಉದ್ಯಮಿಗಳು ಸದುಪಯೋಗಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನ್ನೊಳಿ ಮಾತನಾಡಿ, ಸಣ್ಣ ಕೈಗಾರಿಕೆಗಳಿಂದ ಸ್ಥಳೀಯ ಆರ್ಥಿಕತೆ ಬೆಳೆವಣಿಗೆಗೆ ಅನುಕೂಲವಾಗುತ್ತದೆ. ಸರಕಾರದ ಹೊಸ ಯೋಜನೆಗಳನ್ನು ಉದ್ಯಮಿಗಳು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೀದರ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಸ್ ನ ಅಧ್ಯಕ್ಷ ಬಿ.ಜಿ.ಶೆಟಕಾರ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಜ್ ಹಲಶೆಟ್ಟಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ.ವಿಜಯಕುಮಾರ್, ಕೆಮಿಕಲ್ ಮತ್ತು ಫಾರ್ಮಾಸ್ಯುಟಿಕಲ್ ಸಂಘದ ಅಧ್ಯಕ್ಷ ದೇವೇಂದ್ರಪ್ಪಾ, ವಿ.ಟಿ.ಪಿ.ಸಿ ಕಲಬುರಗಿ ಶಾಖಾ ಕಛೇರಿಯ ಸಹಾಯಕ ನಿರ್ದೇಶಕ ಜಾಫರ್ ಖಾಸಿಂ ಅನ್ಸಾರಿ, ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.