ಭಾಲ್ಕಿ, ಕಮಲನಗರ ರೈಲ್ವೆ ನಿಲ್ದಾಣವನ್ನು ಅಮೃತ ಭಾರತ್ ಯೋಜನೆಗೆ ಸೇರಿಸಿ : ಸಂಸದ ಸಾಗರ್ ಖಂಡ್ರೆ

ಸಾಗರ್ ಖಂಡ್ರೆ
ಬೀದರ್ : ಭಾಲ್ಕಿ ಹಾಗೂ ಕಮಲನಗರ ರೈಲ್ವೆ ನಿಲ್ದಾಣವನ್ನು ಅಮೃತ ಭಾರತ್ ಯೋಜನೆಗೆ ಸೇರಿಸಿ ಅಭಿವೃದ್ಧಿಪಡಿಸಬೇಕು ಎಂದು ಸಂಸದ ಸಾಗರ್ ಖಂಡ್ರೆ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಇಂದು ಸಂಸತ್ತಿನಲ್ಲಿ ಮಾತನಾಡಿದ ಅವರು, ಬೀದರ್-ಬೆಂಗಳೂರು ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ 2 ಬೋಗಿ ಸೇರಿಸಬೇಕು. ದಕ್ಷಿಣ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಹೈದರಾಬಾದ್ ನಿಂದ ಬೀದರ್ ಗೆ ವಿಸ್ತರಿಸಿ, ದೆಹಲಿಗೆ ಉತ್ತಮ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದರು.
ಬೀದರ್ ಹಾಗೂ ಬೆಂಗಳೂರು ನಡುವೆ ವಂದೇ ಭಾರತ ರೈಲು ಆರಂಭಿಸಿ ಪ್ರವಾಸಿಗರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. ತಾಂಡೂರು ಸಿಮೆಂಟ್ ಕ್ಲಸ್ಟರ್ ದಿಂದ ಜಹೀರಾಬಾದ್ ಗೆ ಸಂಚರಿಸುವ ಹೊಸ ರೈಲು ಮಾರ್ಗವನ್ನು ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿ ತಾಲ್ಲೂಕು ಮೂಲಕ ಸಾಗುವಂತೆ ಮಾರ್ಗ ಸೂಚಿಸಬೇಕು. ಚಿಂಚೋಳಿಯು ಹಿಂದುಳಿದ ತಾಲ್ಲೂಕಾಗಿದ್ದು, ಈ ಹೊಸ ರೈಲು ಮಾರ್ಗವು ಆ ಭಾಗದ ಜನರ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಾಯವಾಗಲಿದೆ ಎಂದು ವಿವರಿಸಿದರು.
ಕಳೆದ ದಶಕದಲ್ಲಿ ರೈಲ್ವೆ ಅಪಘಾತ ಸಂಭವಿಸಿ 2.6 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಎನ್ ಸಿ ಆರ್ ಬಿ ಅಂಕಿಅಂಶ ಉಲ್ಲೇಖಿಸಿದ ಅವರು, ಈ ಸಮಸ್ಯೆ ಪರಿಹಾರಕ್ಕಾಗಿ ಕೆಎವಿಎಸಿಎಚ್ ತಂತ್ರಜ್ಞಾನ ತ್ವರಿತಗತಿಯಲ್ಲಿ ಜಾರಿಗೆ ತರಬೇಕು ಎಂದು ಹೇಳಿದರು.
ಈಗಾಗಲೇ 68 ಸಾವಿರ ಕಿ.ಮೀ ರೈಲ್ವೆ ಮಾರ್ಗಗಳ ಪೈಕಿ ಕೇವಲ 3,700 ಕಿ.ಮೀ ವ್ಯಾಪ್ತಿಯಲ್ಲಿಯೇ ಈ ತಂತ್ರಜ್ಞಾನ ಜಾರಿಗೆ ಬಂದಿದೆ. ಹಾಗಾಗಿ ಈ ಯೋಜನೆ ಎಲ್ಲಕಡೆ ವಿಸ್ತರಿಸಬೇಕು ಎಂದರು.
ಅಮೃತ ಭಾರತ್ ನಿಲ್ದಾಣ ಯೋಜನೆಯ ಕಾರ್ಯವು ನಿಧಾನಗತಿಯಾಗಿದ್ದು, 2024-25 ರಲ್ಲಿ 450 ಕ್ಕೂ ಅಧಿಕ ನಿಲ್ದಾಣಗಳು ಪುನರ್ ಅಭಿವೃದ್ಧಿಪಡಿಸುವ ಯೋಜನೆಯಿದ್ದರೂ ಸಹ 2024 ರ ಡಿಸೆಂಬರ್ ವರೆಗೆ ಕೇವಲ ಒಂದು ನಿಲ್ದಾಣ ಮಾತ್ರ ಪೂರ್ಣಗೊಂಡಿದೆ. ಈ ಯೋಜನೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಎಲ್ಲಾ ರೈಲು ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿರುವುದರಿಂದ ಪ್ರಯಾಣಿಕರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ದೆಹಲಿ ರೈಲು ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿ ಕಾಲ್ತುಳಿತದಿಂದ ಅನೇಕರು ಪ್ರಾಣ ಕಳೆದುಕೊಂಡ ಘಟನೆ ಈ ಕುರಿತು ಗಂಭೀರತೆಯನ್ನು ತೋರಿಸುತ್ತದೆ. ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಜನದಟ್ಟಣೆ ನಿಯಂತ್ರಣಕ್ಕೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಎಲ್ಲಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆ ಖಾತ್ರಿಗೊಳಿಸಲು ಹೆಚ್ಚುವರರಿ ಭದ್ರತಾ ಕ್ರಮಗಳು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ, ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವಾಗಿರುವ ಮಾಧ್ಯಮ ಕ್ಷೇತ್ರಕ್ಕೆ ನೀಡಲಾಗುತ್ತಿದ್ದ 50 ಪ್ರತೀಶತ ರಿಯಾಯಿತಿಯನ್ನು ಕೋವಿಡ್ ನಂತರ ಸ್ಥಗಿತಗೊಳಿಸಲಾಗಿದೆ. ಈ ರಿಯಾಯಿತಿಯನ್ನು ಮರು ಪ್ರಾರಂಭಿಸಬೇಕು ಎಂದು ತಿಳಿಸಿದರು.