ಬೀದರ್ | ಮಾ.23 ರಂದು ಒಳ ಮೀಸಲಾತಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ : ಮಾರುತಿ ಬೌದ್ದೆ

Update: 2025-03-17 19:08 IST
Photo of Press meet
  • whatsapp icon

ಬೀದರ್ : ಮಾ.23 ರಂದು ಬೆಂಗಳೂರಿನ ವಸಂತನಗರ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಒಳ ಮೀಸಲಾತಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬಲಗೈ ಹೊಲೆಯ ಸಂಬಂಧಿತ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಮಾರುತಿ ಬೌದ್ದೆ ತಿಳಿಸಿದರು.

ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಏಕ ಸದಸ್ಯತ್ವ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ನಾಗಮೋಹನದಾಸ ಅವರು ಭಾಗವಹಿಸಿ ಮನವಿ ಪತ್ರ ಸ್ವೀಕರಿಸಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಲಗೈ ಹೊಲೆಯ ಸಂಬಂಧಿ ಉಪಜಾತಿಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹಾಗೆಯೇ ವಿಚಾರವಂತರು, ಗಣ್ಯರು, ವಕೀಲರು, ರಾಜಕಾರಣಿಗಳು, ವಿದ್ಯಾರ್ಥಿಗಳು ಹಾಗೂ ಸಮಾಜದ ಕಾರ್ಯಕರ್ತರು ಸೇರಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸಮಿತಿ ಉಪಾಧ್ಯಕ್ಷ ವಿಠಲದಾಸ್ ಪ್ಯಾಗೆ ಅವರು ಮಾತನಾಡಿ, ದೇಶದ ಪರಿಶಿಷ್ಟ ಜಾತಿಗಳಲ್ಲಿನ ಉಪಜಾತಿಗಳಿಗೆ ಒಳಮೀಸಲಾತಿ ಜಾರಿ ಮಾಡಲು ಆಯಾ ರಾಜ್ಯ ಸರಕಾರಗಳು ಅಧಿಕಾರ ಹೊಂದಿವೆ ಎಂದು ಸುಪ್ರಿಂಕೋರ್ಟ್ ತೀರ್ಪು ನಿಡುತ್ತಿದ್ದಂತೆ ಇಡೀ ಭಾರತದಾದ್ಯಂತ ರಾಜಕೀಯ ಸಂಚಲನ ಉಂಟಾಗಿದೆ. ಉತ್ತರ ಭಾರತದ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶಗಳಲ್ಲಿ ಒಳ ಮೀಸಲಾತಿ ಚರ್ಚೆ ಉಂಟಾಗಿದೆ. ತೆಲಂಗಾಣ, ಕರ್ನಾಟಕ ಸರಕಾರಗಳು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ನೇಮಿಸಿ ವರದಿಗೆ ಆಹ್ವಾನಿಸಿದೆ. ಕರ್ನಾಟಕದಲ್ಲಿ ಒಳಮೀಸಲಾತಿ ಸಂಬಂಧ ಸುಪ್ರಿಂಕೋರ್ಟ್ ತೀರ್ಪನ್ನು ಹೊಲೆಯ ಮತ್ತು ಮಾದಿಗ ಸಮುದಾಯಗಳು ಸ್ವಾಗತಿಸಿವೆ ಎಂದು ಹೇಳಿದರು.

ಮಾದಿಗ ಸಮುದಾಯದ ಸಂಘಟನೆ ಮತ್ತು ಮುಖಂಡರು ಸದಾಶಿವ ವರದಿ ಆಧಾರದ ಮೇಲೆ ಮೀಸಲಾತಿ ತಕ್ಷಣವೇ ಜಾರಿಗೆ ತರಬೇಕು ಎಂದು ರಾಜ್ಯ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಬಲಗೈ ಸಮುದಾಯದ ಮುಖಂಡರು ಮತ್ತು ಸಂಘಟನೆಗಳು ಸದಾಶಿವ ಆಯೋಗದ ವರದಿ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ತರುವುದು ಬೇಡ. ಏಕೆಂದರೆ ಈ ವರದಿಯಲ್ಲಿರುವ ದತ್ತಾಂಶ ಅಂಕಿ ಅಂಶಗಳು ತಪ್ಪು ಮಾಹಿತಿಯಿಂದ ಕೂಡಿವೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಉಪಜಾತಿಗಳ ಶೀರುನಾಮೆಯಲ್ಲಿ ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಭಾಗಗಳಲ್ಲಿ ಪರಸ್ಪರ ಏರುಪೇರು ಆಗಿದೆ. ಮತ್ತು ಈ ಆಯೋಗದಲ್ಲಿ ಉಲ್ಲೇಖಿಸಿರುವ 101 ಉಪಜಾತಿಗಳು ಈಗ 184ಕ್ಕೆ ಏರಿರುವುರಿಂದ ಮತ್ತೊಮ್ಮೆ ವೈಜ್ಞಾನಿಕ ವರದಿ ಉಪಜಾತಿಗಳೊಂದಿಗೆ ಸ್ಪಷ್ಟವಾಗಿ ನಮೂದಿಸಿ ಜಾರಿಗೊಳಿಸಬೇಕು ಎಂದರು.

ಈ ಹಿಂದಿನ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಒಳಮೀಸಲಾತಿಯನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದು, ನ್ಯಾಯ ಸಮ್ಮತವಾಗಿರುವುದಿಲ್ಲ. ವಸ್ತು ನಿಷ್ಠೆ, ವೈಜ್ಞಾನಿಕ ಸಮಗ್ರ ಅಧ್ಯಯನವಿಲ್ಲದೇ, ಅಸ್ಪೃಶ್ಯರಲ್ಲಿನ ಬಲಗೈ ಎಂದರೆ ಹೊಲೆಯ ಸಮುದಾಯವು ಎಲ್ಲಾ ಸೌಲಭ್ಯ ಪಡೆದಿದೆ ಎಂದು ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಜೆ.ಸಿ. ಮಾದುಸ್ವಾಮಿ ಉಪ ಸಮಿತಿ ವರದಿಯಲ್ಲಿ ಹೇಳಿರುವುದು ಅವೈಜ್ಞಾನಿಕವಾಗಿದೆ. ಹಿಂದಿನ ಬಿಜೆಪಿ ಸರ್ಕಾರವು ಬಲಗೈ ಸಮಾಜಕ್ಕೆ ಘನಘೋರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಸಮಿತಿಯ ಗೌರವಾಧ್ಯಕ್ಷ ಡಾ.ಕಾಶಿನಾಥ್ ಚಲ್ವಾ ಮಾತನಾಡಿ, ಹಾಲಿ ಸಿದ್ಧರಾಮಯ್ಯನವರ ನೇತೃತ್ವದ ಸರಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಒಳಮೀಸಲಾತಿ ಆಯೋಗವನ್ನು ನೇಮಿಸಿದೆ. ಹಾಗಾಗಿ ಈ ಹಿಂದಿನ ಬಿಜೆಪಿ ಸರ್ಕಾರವನ್ನು ಅವೈಜ್ಞಾನಿಕ ಒಳಮೀಸಲಾತಿಯನ್ನು ಹಂಚಿಕೆ ಮಾಡಿರುವುದು ಅಸಮರ್ಪಕವಾಗಿದೆ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿರುವ ಬಲಗೈ ಹೊಲೆಯ ಸಂಬಂಧ ಉಪಜಾತಿಗಳು 60 ಲಕ್ಷಕ್ಕೂ ಅಧಿಕ ಬಹು ದೊಡ್ಡ ಸಂಖ್ಯೆಯಲ್ಲಿದೆ. ಈ ಭಾಗದ ಹೊಲೆಯ ಸಮುದಾಯವನ್ನು ಒಳಮೀಸಲಾತಿಯ 1 ಪ್ರತೀಶತ ಮೀಸಲಾತಿಯಲ್ಲಿ ದೂಡಲಾಗುತ್ತಿದೆ. ಇದರಿಂದ ಹೊಲೆಯ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಹಾಗಾಗಿ ಈ ಭಾಗದ ಹೊಲೆಯ ಸಮುದಾಯಕ್ಕೆ 5 ಪ್ರತೀಶತ ಮೀಸಲಾತಿ ಇರುವ ಗುಂಪಿಗೆ ಸೇರಿಸಬೇಕು. ಇಲ್ಲದಿದ್ದರೆ ಇನ್ನೊಂದು ಸಲ ವೈಜ್ಞಾನಿಕವಾಗಿ ಜಾತಿ, ಉಪಜಾತಿ ಜನಗಣತಿ ನಡೆಸಿ ನಿಖರ ಮಾಹಿತಿ ಪಡೆದು, ಒಳಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಮಹೇಶ್ ಗೋರನಾಳಕರ್, ಉಪಾಧ್ಯಕ್ಷರಾದ ಮಹಾಲಿಂಗ್ ಬೆಲ್ದಾಳ್, ಗಂಗಮ್ಮ ಫುಲೆ, ಜಿಲ್ಲಾ ಸಹ ಕಾರ್ಯದರ್ಶಿ ರಾಜಪ್ಪ ಗುನ್ನಳ್ಳಿಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿನಯ್ ಮಾಳಗೆ, ಖಜಾಂಚಿ ದಶರಥ್ ಗುರು, ಯುವ ಮುಖಂಡರಾದ ಸುಂದರ್ ಹಾಗೂ ಶ್ರೀಧರ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News