ಬೀದರ್ | ಉತ್ತಮ ಆರೋಗ್ಯಕ್ಕೆ ಕ್ರೀಡೆ ಅವಶ್ಯಕ : ಶತ್ರುಹನ್ ಕಶ್ಯಪ್
ಬೀದರ್ : ಆಧುನಿಕ ಯುಗದಲ್ಲಿ ಕೆಲಸದ ಒತ್ತಡಗಳಿಂದ ಹೊರಬಂದು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಪಡೆಯಲು ಸಾಧ್ಯ ಎಂದು ಸೂರ್ಯ ಫೌಂಡೇಶನ್ ದಕ್ಷಿಣ ಭಾರತ ವಲಯದ ಪ್ರಮುಖರಾದ ಶತ್ರುಹನ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ.
ಭಾಲ್ಕಿ ತಾಲ್ಲೂಕಿನ ದಾದೋಡಿ ತಾಂಡಾದಲ್ಲಿ ಸೂರ್ಯ ಫೌಂಡೇಶನ್ ವತಿಯಿಂದ ಆಯೋಜಿಸಿದ ಕ್ರೀಡಾಕೂಟ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯದ ದಿನಗಳಲ್ಲಿ ತುಂಬಾ ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸುತ್ತೇವೆ. ನಂತರ ನಮ್ಮದೇ ವೃತ್ತಿ ಹಾಗೂ ಇನ್ನಿತರ ಕಾರಣಗಳಿಂದ ಕ್ರೀಡೆಗಳಿಂದ ದೂರವಾಗುತ್ತೇವೆ. ಇದರಿಂದಾಗಿ ಜನರು ದೈಹಿಕ ಮತ್ತು ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಿದ್ದಾರೆ. ಕ್ರೀಡೆ ಮುಂದುವರೆಸಿಕೊಂಡು ಹೋದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಸೂರ್ಯ ಫೌಂಡೇಶನ್ ಸಂಯೋಜಕ ಗುರುನಾಥ್ ರಾಜಗೀರಾ ಮಾತನಾಡಿ, ಫೌಂಡೇಶನ್ ಸಂಸ್ಥಾಪಕರಾದ ಪದ್ಮಶ್ರೀ ಜಯಪ್ರಕಾಶ್ ಅಗ್ರವಾಲ್ ಅವರ ಜನ್ಮದಿನದಿಂದ (ನ.14) ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ (ಡಿ.25) ವರೆಗೆ ದೇಶಾದ್ಯಂತ 17 ರಾಜ್ಯಗಳಲ್ಲಿ ಕ್ರೀಡಾಕೂಟ ಸ್ಪರ್ಧೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಬೀದರ್ ಜಿಲ್ಲೆಯಲ್ಲಿಯು ಫೌಂಡೇಶನ್ ರಾಷ್ಟ್ರೀಯ ಉಪಾಧ್ಯಕ್ಷ ಅನಂತ್ ಬಿರಾದಾರ್ ಅವರ ಮಾರ್ಗದರ್ಶನದಲ್ಲಿ ವಿವಿಧ ಸೇವಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಿದ್ದು ಕಾಡೊದೆ, ಸುನೀಲ್ ಪವಾರ್, ರಮೇಶ್ ಅರಾಳೆ, ಸಂಗಮೇಶ್ ದಾನಿ ಹಾಗೂ ಸಂಗಮೇಶ್ ಬಿರಾದಾರ್ ಸೇರಿದಂತೆ ಅನೇಕ ಕ್ರೀಡಾಪಟುಗಳು ಭಾಗವಹಿಸಿದ್ದರು.