ಬೀದರ್ | ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರನ್ನು ಅಮಾನತುಗೊಳಿಸಲು ಒತ್ತಾಯ

Update: 2024-12-24 14:31 GMT

ಬೀದರ್ : ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ಸಿದ್ದರಾಮ ಸಿಂಧೆ ಅವರ ಕಾರ್ಯ ಅವಧಿಯಲ್ಲಿ ನಿರಂತರ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಅವರನ್ನು ಕೂಡಲೇ ಅಮಾನತು ಮಾಡಿ ತನಿಖೆಗೆ ಒಳಪಡಿಸಬೇಕು ಎಂದು ಅಖಿಲ ಕರ್ನಾಟಕ ಜೈಭೀಮ್ ಯುವ ಸೇನೆ ಒತ್ತಾಯಿಸಿದೆ.

ಜಿಲ್ಲಾಧಿಕಾರಿಗಳ ಮುಖಾಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಸಿದ್ದರಾಮ ಸಿಂಧೆ ಅವರ ಕಾರ್ಯ ಅವಧಿಯಲ್ಲಿ ನಿರಂತರ ಭ್ರಷ್ಟಾಚಾರ ನಡೆದಿದೆ. ಇವರು ಕೋಟ್ಯಾಂತರ ರೂ. ಅವ್ಯವಹಾರ ಮಾಡಿದ್ದಾರೆ. ಇವರ ವಿರುದ್ಧ ಅನೇಕ ಸಂಘಟನೆಗಳು ಲಿಖಿತ ರೂಪದಲ್ಲಿ ಹಾಗೂ ಮೌಖಿಕವಾಗಿ ಸುಮಾರು ಸಲ ದೂರು ಸಲ್ಲಿಸಿದರೂ, ಸಹ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಶೋಚನೀಯವಾಗಿದೆ ಎಂದು ತಿಳಿಸಿದರು.

ಭ್ರಷ್ಟಚಾರದಲ್ಲಿ ತೊಡಗಿರುವ ಅಧಿಕಾರಿ ವಿರುದ್ಧ ಉನ್ನತ ಮಟ್ಟದ ವಿಚಾರಣೆಯಾಗಬೇಕು. ಅವರು ಅನಧಿಕೃತವಾಗಿ ಸಂಪಾದಿಸಿರುವ ಸ್ಥಿರ ಹಾಗೂ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜೈಭೀಮ್ ಯುವ ಸೇನೆ ಜಿಲ್ಲಾಧ್ಯಕ್ಷ ಗಜ ಸೂರ್ಯ, ಕರ್ನಾಟಕ ದಲಿತ ಸೇನೆ ಜಿಲ್ಲಾಧ್ಯಕ್ಷ ಧನರಾಜ್ ಕೋಳಾರ್, ಗುರುದಾಸ್ ಅಮದಲಪಾಡ ಹಾಗೂ ಬಸವರಾಜ್ ಕೊಳ್ಳುರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News