ಬೀದರ್ : ಬೈಕ್ ಢಿಕ್ಕಿ; ಪಾದಚಾರಿ ವೃದ್ಧೆ ಮೃತ್ಯು, ಸವಾರನ ಸ್ಥಿತಿ ಗಂಭೀರ
Update: 2024-12-24 06:30 GMT
ಬೀದರ್: ರಸ್ತೆ ಅಪಘಾತವೊಂದರಲ್ಲಿ ಪಾದಚಾರಿ ವೃದ್ಧೆಯೊಬ್ಬರು ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಬೀದರ್ - ಔರಾದ್ ಹೆದ್ದಾರಿಯ ಸಂತಪುರ ಬಳಿ ಸೋಮವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಜಿರ್ಗಾ (ಬಿ) ಗ್ರಾಮದ ನಿವಾಸಿಯಾದ ಲಕ್ಷ್ಮಿಬಾಯಿ ಬಂಬುಳಗೆ (70) ಮೃತ ವೃದ್ಧೆ. ಇವರು ಸಂತಪುರದಿಂದ ಜಿರ್ಗಾ (ಬಿ) ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ ಬಂದ ಯುವಕ ವೃದ್ಧೆಗೆ ಗುದ್ದಿ, ಮುಂದಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ.
ತಕ್ಷಣವೇ ವೃದ್ಧೆಯನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿ ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.