ಕನ್ನಡದ ರಕ್ಷಣೆಯ ಮನೋಭಾವ ಎಲ್ಲರಲ್ಲಿಯೂ ಬೆಳೆಯಬೇಕು : ಶಾಸಕ ಪ್ರಭು ಚವ್ಹಾಣ್‌

Update: 2024-11-01 11:56 GMT

 ಪ್ರಭು.ಬಿ ಚವ್ಹಾಣ್‌

ಬೀದರ್: ಕನ್ನಡ ಜಗತ್ತಿನ ಅತ್ಯಂತ ಸುಂದರವಾದ ಭಾಷೆಯಾಗಿದೆ. ಎಲ್ಲರೂ ಕನ್ನಡ ಮಾತನಾಡುವ ಮೂಲಕ ಕನ್ನಡಾಭಿಮಾನ ಮೆರೆಯಬೇಕು. ಕನ್ನಡದ ರಕ್ಷಣೆಯ ಮನೋಭಾವ ಎಲ್ಲರಲ್ಲಿಯೂ ಬೆಳೆಯಬೇಕು ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ್‌ ಅವರು ತಿಳಿಸಿದರು.

ಕನ್ನಡ ರಾಜ್ಯೋತ್ಸವದ ನಿಮಿತ್ತ ತಾಲೂಕು ಆಡಳಿತದ ವತಿಯಿಂದ ಔರಾದ(ಬಿ) ತಾಲೂಕು ಆಡಳಿತ ಸೌಧದ ಆವರಣದಲ್ಲಿ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಡಿನಲ್ಲಿರುವ ಎಲ್ಲರೂ ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು. ಕನ್ನಡ ಕಾರ್ಯಕ್ರಮಗಳ ಕುರಿತ ಪ್ರಚಾರ ಮತ್ತು ಪ್ರಸಾರ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಕನ್ನಡ ವಿಷಯದಲ್ಲಿ ಏನಾದರೂ ಸಮಸ್ಯೆಗಳು ಎದುರಾದರೆ ಹಿಂಜರಿಯದೇ ಹೋರಾಡುವ ಮನೋಭಾವ ಬರಬೇಕು ಎಂದು ಹೇಳಿದರು.

ಔರಾದ್‌ನಲ್ಲಿ ಹಿಂದೆ ಮರಾಠಿ, ತೆಲುಗು ಭಾಷೆಯ ಪ್ರಭಾವ ಹೆಚ್ಚಿನ ಪ್ರಮಾಣದಲ್ಲಿತ್ತು. ಕನ್ನಡ ಶಾಲೆಗಳು ಇಲ್ಲದಿರುವ ಕಾರಣ ಅನಿವಾರ್ಯವಾಗಿ ನಾನು ಮರಾಠಿ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಬೇಕಾಯಿತು. ಮುಂದೆ ನಮ್ಮ ಮಕ್ಕಳಿಗೆ ಈ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ನಾನು ಶಾಸಕನಾದ ನಂತರ ಕ್ಷೇತ್ರದಾದ್ಯಂತ ಹಲವು ಕನ್ನಡ ಶಾಲೆಗಳನ್ನು ತೆರೆದು ಕನ್ನಡ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿದ್ದೇನೆ. ಇಲ್ಲಿ ಹಿಂದೆಂದಿಗಿಂತಲೂ ಕನ್ನಡ ಸುಧಾರಣೆ ಕಂಡಿದೆ ಎಂದು ಹೇಳಿದರು.

ನಾನು ಶಾಸಕನಾದ ನಂತರ ಔರಾದನಲ್ಲಿ ತಾಲೂಕು ಕನ್ನಡ ಭವನ ನಿರ್ಮಿಸಿದ್ದೇನೆ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ 2 ಕೋಟಿ ರೂ. ಅನುದಾನ ತಂದು ಜಿಲ್ಲಾ ಕನ್ನಡ ಭವನ ನಿರ್ಮಿಸಿದ್ದೇನೆ. ಸಾಹಿತಿ ಸಂಗಮ ಎನ್ನುವ ವಿನೂತನ ಕಾರ್ಯಕ್ರಮ ಏರ್ಪಡಿಸಿ ಕನ್ನಡ ಸಾಹಿತಿಗಳು ಮತ್ತು ಕಲಾವಿದರ ಮನೆಗಳಿಗೆ ಭೇಟಿ ನೀಡಿ ಗೌರವಿಸುವ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ 6 ತಾಲೂಕು ಸಾಹಿತ್ಯ ಸಮ್ಮೇಳನಗಳು ಹಾಗೂ 3 ವಲಯ ಸಮ್ಮೇಳನಗಳನ್ನು ಮಾಡಿದ್ದೇನೆ. ನಮ್ಮಲ್ಲಿರುವ ಅನೇಕ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಶಾಸನ ಕೊಡಿಸಲಾಗುತ್ತಿದೆ. ಯಾರೆಷ್ಟೇ ವಿರೋಧಿಸಿದರೂ ಕನ್ನಡ ಪರ ಕೆಲಸಗಳನ್ನು ನಿರಂತರವಾಗಿ ಮುಂದುವರೆಸುತ್ತೇನೆ. ನಾಡು ಮತ್ತು ನುಡಿಯ ವಿಷಯದಲ್ಲಿ ಯಾವತ್ತೂ ರಾಜಿಯಾಗುವುದಿಲ್ಲ. ಕ್ಷೇತ್ರದಲ್ಲಿ ಕನ್ನಡದ ಅಭಿವೃದ್ಧಿಗೆ ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡುತ್ತೇನೆ ಎಂದರು. ಕೆಲವು ದಿನಗಳಲ್ಲಿಯೇ ತಾಲೂಕು ಸಮ್ಮೇಳನ ನಡೆಸಲಾಗುವುದು ಎಂದು ಘೋಷಿಸಿದರು.

ಔರಾದ(ಬಿ) ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಿರಂತರ ಕೆಲಸ ಮಾಡುತ್ತಿದ್ದೇನೆ. 560 ಕೋಟಿ ರೂ.ಯ ಕೆರೆ ತುಂಬುವ ಯೋಜನೆ, 118 ಕೋಟಿ ರೂ.ಯ ನಾಗೂರ(ಬಿ) ವಿದ್ಯುತ್ ಉಪ ಕೇಂದ್ರ ಸ್ಥಾಪನೆ, ಟ್ರೀ ಪಾರ್ಕ್, ಹೈಟೆಕ್ ಮಲ್ಟಿಸ್ಪೆಷಲ್ ಪಶು ಆಸ್ಪತ್ರೆ, ಕಾರಂಜಾ ಜಲಾಶಯದಿಂದ ಔರಾದ(ಬಿ) ಪಟ್ಟಣಕ್ಕೆ ನೀರು ಸರಬರಾಜು, ಯೋಜನೆ, ಸಿಪೆಟ್ ಕಾಲೇಜು, ವಸತಿ ಶಾಲೆಗಳ ನಿರ್ಮಾಣ,ಹೀಗೆ ಔರಾದ(ಬಿ) ಹಾಗೂ ಕಮಲನಗರ ತಾಲೂಕುಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಔರಾದ ಪಟ್ಟಣದ ಮಾಸ್ಟರ್ ಪ್ಲಾನ್ ಗೆ ಸರಕಾರ ಅನುಮೋದನೆ‌ ನೀಡಿದ್ದು, ಪಟ್ಟಣದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ತಾಲೂಕು ಆಡಳಿತದ ವತಿಯಿಂದ ವಿವಿಧ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾವಿದರಾದ ಮಂಗಲಾ ಅತಾಳೆ, ಸಾಮಾಜ ಸೇವಕ ಶರಣಪ್ಪ ನಾಗಲಗಿದ್ದೆ, ಸಾಹಿತಿ ಜಗದೇವಿ ತೇಲಿ, ಕಲ್ಲಪ್ಪ ಬಾವಗೆ, ಪ್ರಗತಿಪರ ರೈತ ಸಂದೀಪ ಭಗವಾನರಾವ ಪೊಲೀಸ್ ಪಾಟೀಲ ಅವರನ್ನು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷರಾದ ದೊಂಡಿಬಾ ನರೋಟೆ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸರುಬಾಯಿ ಘಳೆ, ಉಪಾಧ್ಯಕ್ಷರಾದ ರಾಧಾಬಾಯಿ ಕೃಷ್ಣ ನರೋಟೆ, ಕಸಾಪ ತಾಲ್ಲೂಕು ಅಧ್ಯಕ್ಷ ಡಾ.ಶಾಲಿವಾನ ಉದಗೀರೆ, ವೃತ್ತ ನಿರೀಕ್ಷಕರಾದ ರಘುವೀರಸಿಂಗ್ ಠಾಕೂರ್, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ, ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ, ಅಧಿಕಾರಿಗಳಾದ ಅನೀಲಕುಮಾರ ಮೇಲ್ದೊಡ್ಡಿ, ಬಿ.ಜಿ ಶೆಳ್ಕೆ, ಪ್ರಕಾಶ ರಾಠೋಡ್, ಸುಭಾಷ್‌ ಸೇರಿದಂತೆ ವಿವಿಧ ಕನ್ನಡಪರ ಸಂಘ ಸಂಸ್ಥೆಗಳ ಮುಖಂಡರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News