ಬೀದರ್ | ಚಿಕಿತ್ಸೆ ಹಾಗೂ ಜಾಗೃತಿಯಿಂದ ಹೆಚ್.ಐ.ವಿ ನಿಯಂತ್ರಣ ಮಾಡಬಹುದು : ಎಂ.ಡಿ ಅಹಮದುದ್ದಿನ್
ಬೀದರ್ : ಕಾಲ ಕಾಲಕ್ಕೆ ಚಿಕಿತ್ಸೆ ಹಾಗೂ ಜಾಗೃತಿಯಿಂದ ಹೆಚ್.ಐ.ವಿ ಸೊಂಕು ತಡೆಗಟ್ಟಬಹುದು ಎಂದು ಬ್ರಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಎಂ.ಡಿ ಅಹಮದುದ್ದಿನ್ ಅಭಿಪ್ರಾಯಪಟ್ಟರು.
ನಗರದ ಭಾರತೀಯ ಕುಟುಂಬ ಯೋಜನಾ ಸಂಘ(ಎಫ್.ಪಿ.ಎ.ಐ) ನಲ್ಲಿ ಇತ್ತೀಚೆಗೆ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆ, ಶರಣ ತತ್ವ ಪ್ರಸಾರ ಸಮಿತಿ ,ನ್ಯೂ ಮದರ್ ತೆರೇಸಾ, ಫ್ಯಾಮಿಲಿ ಪ್ಲಾನಿಂಗ್ ಅಸೊಶಿಯಶನ್ ಆಫ್ ಇಂಡಿಯಾ ವತಿಯಿಂದ ಹಮ್ಮಿಕೊಂಡ ʼಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮʼ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್.ಐ.ವಿ ಒಂದು ಸಾಂಕ್ರಾಮಿಕ ಪಿಡುಗು ಇಲ್ಲದಿದ್ದರೂ ಅದರಿಂದ ಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಹೆಚ್.ಐ.ವಿ ಸೊಂಕಿತರೊಂದಿಗೆ ಓಡಾಡುವುದು, ಕೈ ಕುಲುಕುವುದು, ಹತ್ತಿರ ಕೂಳಿತುಕೊಳ್ಳುವುದರಿಂದ ಇದು ಹರಡುವುದಿಲ್ಲ. ಲೈಂಗಿಕ ಸಂಪರ್ಕ, ರೋಗಿಯ ರಕ್ತವು ನಮ್ಮ ರಕ್ತದೊಂದಿಗೆ ಮಿಶ್ರಿತವಾಗುವುದರ ಜೊತೆಗೆ ಸೋಂಕಿತ ವ್ಯಕ್ತಿ ಬಳಿಸಿದ ಮಾರಕಾಸ್ತ್ರ, ಕ್ಷೌರ ಉಪಕರಣಗಳು, ಸಿರೆಂಜ್ ಬಳಸುವುದರಿಂದ ಈ ಮಹಾಮಾರಿ ರೋಗ ಹರಡುತ್ತದೆ ಎಂದು ಹೇಳಿದರು.
ಭಾರತೀಯ ಕುಟುಂಬ ಯೋಜನಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್ ಮಾತನಾಡಿ, ಹೆಚ್.ಐ.ವಿ ಇರುವ ಸೊಂಕಿತರಿಗೆ ಎಫ್.ಪಿ.ಎ.ಐ ಸುಮಾರು 500ಕ್ಕೂ ಅಧಿಕ ಶಸ್ತ್ರ ಚಿಕಿತ್ಸೆಗಳನ್ನು ಮಾಡಿದೆ. ನಮ್ಮಲ್ಲಿರುವ ಡಾ.ಲಕಶೆಟ್ಟಿಯವರಂಥ ವೈದ್ಯರಿಂದ ಇದು ಸಾಧ್ಯವಾಗಿದೆ. ಇಂತಹ ಮೇಧಾವಿಗಳಿಗೆ ಜಿಲ್ಲಾಡಳಿತ, ಜನಪ್ರತಿನಿಧಿ ಹಾಗೂ ಸಂಘ-ಸಂಸ್ಥೆಗಳು ಗುರುತಿಸಿ ಸನ್ಮಾನಿಸುವುದು ಅಗತ್ಯವಾಗಿದೆ ಎಂದರು.
ಜಿಲ್ಲಾ ಏಡ್ಸ್ ತಡೆಗಟ್ಟುವ ಘಟಕದ ಜಿಲ್ಲಾ ಮೇಲ್ವಿಚಾರಕ ಸೂರ್ಯಕಾಂತ್ ಸಂಗೋಳ್ಕರ್ ಅವರು ಜಿಲ್ಲೆಯ ಹೆಚ್.ಐ.ವಿ ಸೊಂಕಿತರ ಅಂಕಿ ಅಂಶ ವಿವರಿಸಿದರು. 2030ರೊಳಗೆ ಭಾರತ ಏಡ್ಸ್ ಮುಕ್ತ ದೇಶವಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈ ಜೋಡಿಸಿವೆ. ಕಳೆದೆರಡು ವರ್ಷಗಳಿಂದ ಈಚೆಗೆ ಹೆಚ್.ಐ.ವಿ ಸೊಂಕಿತರಿಗೆ ಹುಟ್ಟುವ ಮಕ್ಕಳು ಹೆಚ್.ಐ.ವಿ ಯಿಂದ ಮುಕ್ತರಾಗಿ ಹುಟ್ಟುತ್ತಿರುವುದು ಸಮಾಧಾನಕರ ಬೆಳವಣಿಗೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಕೆ ಗಣಪತಿ, ಹಿರಿಯ ಸಾಹಿತಿ ಎಂ.ಜಿ ದೇಶಪಾಂಡೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಪ್ರಮುಖರಾದ ವೀರಭದ್ರಪ್ಪ ಉಪ್ಪಿನ್, ಸುನಿಲಕುಮಾರ್ ಕುಲಕರ್ಣಿ, ಪಾಂಡುರಂಗ್ ಬೆಲ್ದಾರ್, ವಿಶ್ವನಾಥ ಸ್ವಾಮಿ, ಸಂಜೀವಕುಮಾರ್ ಸ್ವಾಮಿ, ಬಸವರಾಜ್ ಖಂಡ್ರೆ, ಶ್ರೀನಿವಾಸ್ ಬಿರಾದಾರ್, ಸಂತೋಷ್ ಶಿಂಧೆ, ಸುಬ್ಬಯ್ಯ ಸ್ವಾಮಿ, ರಿಯಾಜ್ ಪಾಶಾ ಕೊಳ್ಳೂರ್ ಹಾಗೂ ಇತರರು ಭಾಗವಹಿಸಿದ್ದರು.