ಬೀದರ್ | ಸರಕಾರಿ ಶಾಲೆಯಲ್ಲಿ ಕೊಳೆತ ಮೊಟ್ಟೆ ವಿತರಣೆ ಆರೋಪ; ವಿದ್ಯಾರ್ಥಿಗಳಿಗೆ ಹೊಟ್ಟೆನೋವು
ಬೀದರ್ : ಸರಕಾರಿ ಶಾಲೆಯಲ್ಲಿ ಕೊಳೆತ ಮೊಟ್ಟೆ ವಿತರಣೆ ಮಾಡಿದ್ದರಿಂದಾಗಿ ಮೊಟ್ಟೆ ಸೇವನೆ ಮಾಡಿದ ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು ಕಾಣಿಸಿಕೊಂಡ ಘಟನೆ ಖಾಸಿಂಪುರ್ (ಸಿ) ಗ್ರಾಮದಲ್ಲಿ ನಡೆದಿದೆ.
ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದಿಂದ ರಾಜ್ಯದ ಸರಕಾರಿ ಶಾಲೆಗಳಲ್ಲಿ ವಾರದ ಆರು ದಿನಗಳು ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ. ಆದರೆ ಬೀದರ್ ತಾಲ್ಲೂಕಿನ ಖಾಸಿಂಪುರ್ (ಸಿ) ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕೊಳೆತ ಮೊಟ್ಟೆಗಳು ವಿತರಿಸುತ್ತಿದ್ದರಿಂದ ಮಕ್ಕಳ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ.
ಕಳೆದ ಒಂದು ತಿಂಗಳಿನಿಂದ ನಮಗೆ ಕೊಳೆತ, ರಬ್ಬರ್ ನಂತಿರುವ ಮೊಟ್ಟೆಗಳು ವಿತರಿಸಲಾಗುತ್ತಿದೆ. ಇದನ್ನು ನಾವು ಮುಖ್ಯೋಪಾಧ್ಯಯರಿಗೆ ತಿಳಿಸಿದರೆ ಅವರು ಏನೂ ಆಗುವುದಿಲ್ಲ ಅದನ್ನೇ ತಿನ್ನಿ ಎಂದು ತಾಕಿತು ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮೊಟ್ಟೆಗಳು ಕೆಟ್ಟ ವಾಸನೆ ಬರುತ್ತಿದ್ದರಿಂದ ಕೆಲ ವಿದ್ಯಾರ್ಥಿಗಳು ಮೊಟ್ಟೆ ತಿನ್ನುವುದು ಬಿಟ್ಟಿದ್ದೇವೆ. ಆದರೆ ಮೊಟ್ಟೆ ಸೇವನೆ ಮಾಡಿದ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೆಲ ದಿನಗಳಿಂದ ನನ್ನ ಮಗಳ ಹೊಟ್ಟೆ ನೋವಾಗುತ್ತಿತ್ತು. ಸ್ಕ್ಯಾನಿಂಗ್ ಮಾಡಿದರೆ ಯಾವುದೇ ರೀತಿಯ ರೋಗಗಳು ಕಂಡುಬಂದಿಲ್ಲ. ಕೊನೆಗೆ ವೈದ್ಯರು ಫುಡ್ ಪಾಯಿಸನ್ (ವಿಷಹಾರ) ಆಗಿದೆ ಎಂದು ಹೇಳಿದರು. ಮೊನ್ನೆ ನನ್ನ ಮಗ ಶಾಲೆಯಿಂದ ಮೊಟ್ಟೆ ತಂದು ತೋರಿಸಿದನು. ಅದು ಸಂಪೂರ್ಣವಾಗಿ ಕೆಟ್ಟು ವಾಸನೆ ಬರುತಿತ್ತು. ನಾನು ಶಾಲೆಗೆ ಭೇಟಿ ನೀಡಿ, ಇದರ ಬಗ್ಗೆ ಮುಖ್ಯೋಪಾಧ್ಯಯರಿಗೆ ತಿಳಿಸಿದ್ದೇನೆ. ಆದರೆ ಅವರು ಇದರ ಬಗ್ಗೆ ಗಮನ ಹರಿಸಲಿಲ್ಲ. ಶಾಲೆಯಲ್ಲಿ ಇನ್ನು 350 ಮೊಟ್ಟೆಗಳಿದ್ದು, ಅವೆಲ್ಲ ಸಂಪೂರ್ಣವಾಗಿ ಕೆಟ್ಟು ರಬ್ಬರ್ ನಂತಾಗಿವೆ.
- ಎಂ ಡಿ ಮೋಸಿನ್ ಪಟೇಲ್, ಎಸ್ಡಿಎಂಸಿ ಅಧ್ಯಕ್ಷ.
ಇವತ್ತು ಬೆಳಿಗ್ಗೆ 10:30 ಕ್ಕ ಎಸ್ ಡಿ ಎಂ ಸಿ ಅಧ್ಯಕ್ಷರು ನನಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ತಕ್ಷಣವೇ ನಾನು ಖಾಸಿಂಪುರ್ (ಸಿ) ಗ್ರಾಮದ ಶಾಲೆಗೆ ಭೇಟಿ ಅಲ್ಲಿನ ವಿದ್ಯಾರ್ಥಿಗಳ ಜೊತೆ ಮಾತಾಡಿದ್ದೇನೆ. ಮೊಟ್ಟೆಯಲ್ಲಿ ವಾಸನೆ ಬರುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದರು. ತಕ್ಷಣವೇ ಬೇರೆ ಮೊಟ್ಟೆಗಳು ತಂದು ವಿದ್ಯಾರ್ಥಿಗಳ ಜೊತೆ ನಾನು ಕೂಡ ಮೊಟ್ಟೆ ಸೇವನೆ ಮಾಡಿ ಬಂದಿದ್ದೇನೆ. ಇನ್ನು ಮುಂದೆ ಮೊಟ್ಟೆಗಳು ಬದಲಾವಣೆ ಮಾಡಿ ಚೆನ್ನಾಗಿರುವ ಮೊಟ್ಟೆಗಳು ವಿತರಣೆ ಮಾಡಬೇಕು ಎಂದು ಮುಖ್ಯೋಪಾಧ್ಯಯರಿಗೆ ಹೇಳಿದ್ದೇನೆ. ಈಗ ಅಲ್ಲಿ ಯಾವುದೇ ಸಮಸ್ಯೆ ಇಲ್ಲ.
- ಝಾಕೀರ್ ಹುಸೈನ್, ಮಧ್ಯಾಹ್ನ ಉಪಹಾರ ಯೋಜನೆ ತಾಲ್ಲೂಕು ಅಧಿಕಾರಿ.