ಕೊಳೆತ ಮೊಟ್ಟೆ ವಿತರಿಸಿದ ಆರೋಪ : ವಿದ್ಯಾರ್ಥಿಗಳ ಜೊತೆ ಊಟ ಮಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ
ಬೀದರ್ : ಕೊಳೆತ ಮೊಟ್ಟೆ ವಿತರಿಸಿ ವಿದ್ಯಾರ್ಥಿಗಳ ಹೊಟ್ಟೆ ನೋವಿಗೆ ಕಾರಣವಾಗಿದ್ದ ಖಾಶಂಪೂರ್ (ಸಿ) ಗ್ರಾಮದ ಸರಕಾರಿ ಶಾಲೆಗೆ ತಾಲ್ಲೂಕು ಪಂಚಾಯತ್ ನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಾಕಿರ್ ಹುಸೇನ್ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಊಟ ಸವಿದರು.
ಬೀದರ್ ತಾಲ್ಲೂಕಿನ ಖಾಶಂಪೂರ್ (ಸಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ ಶಾಲೆಯಲ್ಲಿ ಕಳಪೆ ಮಟ್ಟದ ಮೊಟ್ಟೆಗಳು ವಿತರಿಸುತ್ತಿದ್ದಾರೆ ಇದರಿಂದಾಗಿ ವಿದ್ಯಾರ್ಥಿಗಳ ಹೊಟ್ಟೆ ನೋವು ಉಂಟಾಗುತ್ತಿದೆ ಎಂದು ಆರೋಪಿಸಿದ್ದರು.
ಘಟನೆ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಾಕಿರ್ ಹುಸೇನ್ ಅವರು, ಗುಣಮಟ್ಟದ ಮೊಟ್ಟೆಗಳನ್ನು ತರಿಸಿ, ಊಟ ತಯಾರಿಸಿದ ನಂತರ ವಿದ್ಯಾರ್ಥಿಗಳ ಜೊತೆಗೆ ಕುಳಿತು ಊಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಮೊಟ್ಟೆ ಮತ್ತು ಆಹಾರ ಒದಗಿಸುವಂತೆ ಮುಖ್ಯೋಪಾಧ್ಯಯರಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿ.ಆರ್.ಪಿ ಶ್ರೀರಾಮ್ ಕಿಶನ್ ರಾಥೋಡ್, ಗ್ರಾಮ ಪಂಚಾಯತ್ ಸದಸ್ಯ ಸುಲ್ತಾನ್ ಪಟೇಲ್, ಎಸ್ ಡಿ ಎಂ ಸಿ ಅಧ್ಯಕ್ಷ ಮೋಹಸಿನ್ ಪಟೇಲ್, ಮುಖ್ಯಗುರು ಎಂ.ಡಿ ಗೌಸುದ್ದೀನ್, ಶಿಕ್ಷಕರಾದ ಕಿಶನರಾವ್, ಪ್ರದೀಪ್ ಹಾಗೂ ಶಿಕ್ಷಕಿ ಆಫ್ರಿನ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.