ಬೀದರ್: ತಿಪ್ಪೆಗುಂಡಿ ಮುಚ್ಚಿ ಬಸ್ಸು ನಿಲ್ದಾಣ ನಿರ್ಮಿಸುವಂತೆ ಗ್ರಾಮಸ್ಥರ ಆಗ್ರಹ
ಬೀದರ್ : ಭಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬ್ಯಾಲಹಳ್ಳಿ (w) ಗ್ರಾಮದ ಮಧ್ಯದಲ್ಲಿ ದೊಡ್ಡದಾದ ತಿಪ್ಪೆಗುಂಡಿಯಿದ್ದು, ಅದನ್ನು ಮುಚ್ಚಿ ಬಸ್ಸು ನಿಲ್ದಾಣ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದ ಮಧ್ಯಭಾಗದಲ್ಲಿ ದೊಡ್ಡದಾದ ತಿಪ್ಪೆಗುಂಡಿ ಇದೆ. ಮಳೆಗಾಲ ಬಂತೆಂದರೆ ಈ ತಿಪ್ಪೆಗುಂಡಿ ಸಂಪೂರ್ಣವಾಗಿ ಕೊಳಚೆ ನೀರಿನಿಂದ ಭರ್ತಿಯಾಗಿ ಹರಿದು ಸುತ್ತಮುತ್ತಲಿನ ಮನೆಗಳಿಗೆ ನುಗ್ಗುತ್ತವೆ. ಇದರಿಂದಾಗಿ ರಾತ್ರಿಯೇಲ್ಲ ಎಚ್ಚರದಿಂದ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗೆಯೇ ಈ ತಿಪ್ಪೆಗುಂಡಿ ರೋಗ ರುಜಿನುಗಳ ಆಗರವಾಗಿದೆ. ಇದು ಗ್ರಾಮದ ಜನರಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಚಿಕ್ಕದಾದ ಹಳ್ಳಿಯದ್ದರಿಂದ ನಮ್ಮ ಊರಿಗೆ ಬಸ್ಸಿನ ವ್ಯವಸ್ಥೆ ಇಲ್ಲ. ಬಸ್ಸಿಗಾಗಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸುಮಾರು ಎರಡು ಕಿ. ಮೀ ನಡೆದುಕೊಂಡು ಹೋಗಬೇಕಾಗುತ್ತದೆ. ಊರಿಗೆ ಬಸ್ಸು ಹಾಕಿ ಎಂದು ಒತ್ತಾಯಿಸಿದರೆ, ಊರಲ್ಲಿ ಬಸ್ಸು ತಿರುವುದಕ್ಕೆ ಜಾಗ ಇಲ್ಲ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳು ಇತ್ತ ಗಮನಹರಿಸಿ ಈ ತಿಪ್ಪೆಗುಂಡಿಗವಿದ್ದ ಜಾಗದಲ್ಲಿ ಬಸ್ಸು ನಿಲ್ದಾಣ ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ವೈಜೀನಾಥ್ ಜಗದೇವ್, ನೀಲಕಂಠ ಸಿಂಧೆ, ಶಾಂತಕುಮಾರ್, ರಾಜುಕುಮಾರ್, ಧೋಂಡಿಬಾ, ಮಹಾದೇವ್ ಹಾಗೂ ಪ್ರಶಾಂತ್ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.