ಬೀದರ್ | ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯ ಹತ್ಯೆ ; ಆರೋಪಿಯ ಬಂಧನ
Update: 2025-01-13 18:05 GMT
ಬೀದರ್ : ಕ್ಷುಲ್ಲಕ ವಿಚಾರಕ್ಕಾಗಿ ನಡೆದ ಜಗಳದಲ್ಲಿ ಯುವಕನೊಬ್ಬ ಹತ್ಯೆಯಾದ ಘಟನೆ ಬಸವಕಲ್ಯಾಣ ತಾಲೂಕಿನ ಧನ್ನೂರಾ (ಕೆ) ವಾಡಿಯಲ್ಲಿ ರವಿವಾರ ಸಾಯಂಕಾಲ ನಡೆದಿದೆ.
ಧನ್ನೂರಾ (ಕೆ) ವಾಡಿ ಗ್ರಾಮದ ನಿವಾಸಿಯಾದ ಜಿತೇಂದ್ರ ಪಾಂಡುರಂಗ್ ಹಲಸೆ (38) ಹತ್ಯೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.
ರವಿವಾರ ಸಾಯಂಕಾಲ ನಾಗನಾಥ್ ಮತ್ತು ಜಿತೇಂದ್ರ ನಡುವೆ ಕ್ಷುಲ್ಲಕ ವಿಚಾರಕ್ಕಾಗಿ ಜಗಳ ನಡೆದಿದ್ದು, ಜಗಳದಲ್ಲಿ ಜಿತೇಂದ್ರ ಎನ್ನುವಾತನ ಮೇಲೆ ತುಳಸಿರಾಮ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಜಿತೇಂದ್ರ ಗಂಭೀರವಾಗಿ ಗಾಯಗೊಂಡಿದ್ದರಿಂದ ಬಸವಕಲ್ಯಾಣ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಜಿತೇಂದ್ರ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.