ಬೀದರ್ | ಸುಂದರ ಸಮಾಜ ನಿರ್ಮಿಸಲು ಚಾರಿತ್ರ್ಯ, ಆತ್ಮಗೌರವಗಳೇ ಶ್ರೇಷ್ಠ ಸಾಧನಗಳಾಗಿವೆ : ಸ್ವಾಮಿ ಜ್ಯೋತಿರ್ಮಯಾನಂದ
ಬೀದರ್ : ಸುಂದರ ಸಮಾಜ ನಿರ್ಮಿಸಲು ಹಾಗೂ ಸಾರ್ಥಕ ಬದುಕು ಸಾಗಿಸಲು ಚಾರಿತ್ರ್ಯ ಮತ್ತು ಆತ್ಮಗೌರವಗಳೇ ಶ್ರೇಷ್ಠ ಸಾಧನಗಳಾಗಿವೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಅಭಿಪ್ರಾಯಪಟ್ಟರು.
ಇಂದು ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಸ್ವಾಮಿ ವಿವೇಕಾನಂದ ಚೆಸ್ ಅಕಾಡೆಮಿ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, ಚಾರಿತ್ರ್ಯ ಮತ್ತು ಆತ್ಮಗೌರವ ನಮಗಿರುವ ಎರಡು ಸರ್ವಶ್ರೇಷ್ಠ ಪದವಿಗಳಾಗಿವೆ. ಸ್ವಾಮಿ ವಿವೇಕಾನಂದರ ಚಿಂತನೆಗಳಂತೆ ಈ ಪದವಿ ಹೊಂದಿದರೆ ಸಮಾಜಕ್ಕೆ ಅಮೋಘ ಕೊಡುಗೆ ಕೊಡಬಹುದು ಎಂದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸದಾನಂದ ಜೋಶಿ, ಚೆಸ್ ಅಕಾಡೆಮಿ ಅಧ್ಯಕ್ಷ ನಿತಿನ್ ಕರ್ಪೂರ್, ಹಿರಿಯ ನೇತ್ರ ತಜ್ಞ ಡಾ.ಮಲ್ಲಿಕಾರ್ಜುನ್ ಚಟ್ನಳ್ಳಿ, ಹಿರಿಯ ಆರ್ಥೋಪೆಡಿಕ್ ಸರ್ಜನ್ ಡಾ.ರಘು ಕೃಷ್ಣಮೂರ್ತಿ, ಬಗದಲ್ ಮೊರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಂಶುಪಾಲ ಚನ್ನಬಸವ ಹೇಡೆ ಹಾಗೂ ಅಂಬುಜಾ ವಿಶ್ವಕರ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.