ಒಂದು ವರ್ಷ ಕಳೆದರೂ ಕಾರಂಜಾದಿಂದ ಔರಾದ್ ಗೆ ನೀರು ಪೂರೈಸುವ ಕಾಮಗಾರಿ ಆರಂಭಿಸಿಲ್ಲ : ಶಾಸಕ ಪ್ರಭು ಚವ್ಹಾಣ್
ಬೀದರ್ : ಒಂದು ವರ್ಷದಿಂದ ಕಾರಂಜಾ ಜಲಾಶಯದಿಂದ ಔರಾದ್ ಪಟ್ಟಣಕ್ಕೆ ನೀರು ಪೂರೈಸುವ ಕಾಮಗಾರಿ ಆರಂಭಿಸಿಲ್ಲ ಎಂದು ಶಾಸಕ ಪ್ರಭು ಚವ್ಹಾಣ್ ಕಿಡಿ ಕಾರಿದ್ದರು.
ಇಂದು ಭಾಲ್ಕಿ ತಾಲೂಕಿನ ತೇಗಂಪುರ್ ಗ್ರಾಮಕ್ಕೆ ಭೇಟಿ ನೀಡಿ ನೀರು ಪೂರೈಸಲು ಬೇಕಾಗುವ ಪೈಪ್ ಮತ್ತು ನೀರಿನ ಟ್ಯಾಂಕ್ ನಿರ್ಮಿಸುವ ಸ್ಥಳ ವೀಕ್ಷಣೆ ಮಾಡಿದರು. ನಂತರ ಕಾರಂಜಾ ಜಲಾಶಯದ ಹತ್ತಿರ ತೆರಳಿ ನೀರು ಪೂರೈಸುವ ಮಾರ್ಗದ ಬಗ್ಗೆ ಮಾಹಿತಿ ಪಡೆದರು.
ಕಾಮಗಾರಿ ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜನವರಿ ತಿಂಗಳು ಬಂತೆಂದರೆ ಔದರ್ ತಾಲೂಕಿನಾದ್ಯಂತ ಕುದಿಯುವ ನೀರಿನ ಬರಗಾಲ ಬೀಳುತ್ತದೆ. 30 ಕೋಟಿ ರೂ. ಮಂಜೂರು ಮಾಡಿ ಮಾಂಜ್ರಾ ನದಿಯಿಂದ ಔರಾದ್ ತಾಲ್ಲೂಕಿಗೆ ನೀರು ಸರಬರಾಜು ಮಾಡಲಾಗಿದೆ. ಆದರೆ ಬೇಸಿಗೆಯಲ್ಲಿ ಮಾಂಜ್ರಾ ನದಿಯ ನೀರು ಬತ್ತಿ ಹೋಗುತ್ತವೆ ಎಂದು ತಿಳಿಸಿದರು.
ಬೇಸಿಗೆಯಲ್ಲಿ ಬರಗಾಲ ಬೀಳುತಿದ್ದ ಕಾರಣದಿಂದ 2023 ರ ಅವಧಿಯಲ್ಲಿ ನಮ್ಮ ಸರಕಾರ ಇದ್ದಾಗ ಕಾರಂಜಾ ಜಲಾಶಯದಿಂದ ಔರಾದ್ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಯೋಜನೆ ತಂದಿದ್ದೇವೆ. ಈ ಕಾಮಗಾರಿ 84 ಕೋಟಿ ರೂ. ವೆಚ್ಚದ್ದಾಗಿದ್ದು, ಈಗಾಗಲೇ ಈ ದುಡ್ಡು ಮಂಜೂರು ಆಗಿದೆ. ಆದರೆ ಕಾಂಗ್ರೆಸ್ ಸರಕಾರ ಬಂದಿದ್ದರಿಂದ ಈ ಕೆಲಸಕ್ಕೆ ಚಾಲನೆ ಸಿಗಲಿಲ್ಲ. ಇವರದ್ದು ಸರಕಾರ ನಡೆಯಬೇಕು ಹಾಗೂ ಲೂಟಿ ಹೊಡೆಯಬೇಕು ಎನ್ನುವ ಸರಕಾರವಿದೆ. ಇವರಿಗೆ 2028 ರಲ್ಲಿ ಜನರು ತಕ್ಕ ಪಾಠ ಕಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕಾಮಗಾರಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಭೈರತಿ ಸುರೇಶ್ ಅವರಿಗೂ ತಿಳಿಸಿದ್ದೇನೆ. ಸರಕಾರಕ್ಕೆ ಪತ್ರ ಕೂಡ ಬರೆದಿದ್ದೇನೆ. ಆದರೂ ಕೂಡ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ನಾನು ಬಿಜೆಪಿ ಶಾಸಕನಾಗಿದ್ದರಿಂದ ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅನಿಸುತ್ತಿದೆ. ಇದರಿಂದಾಗಿ ನಮ್ಮ ತಾಲ್ಲೂಕಿನ ಜನರಿಗೆಲ್ಲ ತುಂಬಾ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವೀಂದ್ರ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ್, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ್ ಅಲ್ಮಾಜೆ, ಶ್ರೀಮಂತ್ ಪಾಟೀಲ್, ದಯಾನಂದ್ ಘೂಳೆ, ಸಂಜು ವಡೆಯರ್, ಕೆರಬಾ ಪವಾರ್, ಸುಜಿತ್ ರಾಠೋಡ್, ಧನಾಜಿ ರಾಠೋಡ್, ಮೃತ್ಯುಂಜಯ ಬಿರಾದಾರ್ ಹಾಗೂ ಇತರರು ಉಪಸ್ಥಿತರಿದ್ದರು.