ಜಾನಪದ ಕಲೆ ಉಳಿಸಿ ಬೆಳೆಸಬೇಕಾದ ಅಗತ್ಯವಿದೆ: ಸಚಿವ ಈಶ್ವರ್ ಖಂಡ್ರೆ

Update: 2025-03-15 20:46 IST
ಜಾನಪದ ಕಲೆ ಉಳಿಸಿ ಬೆಳೆಸಬೇಕಾದ ಅಗತ್ಯವಿದೆ: ಸಚಿವ ಈಶ್ವರ್ ಖಂಡ್ರೆ
  • whatsapp icon

ಬೀದರ್ : ಜಾನಪದ ಕಲೆ ಅತೀ ಪ್ರಾಚೀನವಾದದ್ದು. ಮಾನವನ ಸಂಸ್ಕೃತಿ, ಪರಂಪರೆಯೊಂದಿಗೆ ಅದು ಹಾಸು ಹೊಕ್ಕಾಗಿದೆ. ಆ ಕಲೆಯನ್ನು ಉಳಿಸಿ ಬೆಳೆಸಬೇಕಾದದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದರು.

ಇಂದು ನಗರದ ರಂಗಮಂದಿರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯು ಹಮ್ಮಿಕೊಂಡಿದ್ದ 2023-24ನೇ ಸಾಲಿನ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ ಪ್ರಧಾನ ಹಾಗೂ ಪುಸ್ತಕ ಬಹುಮಾನ ವಿತರಣಾ ಸಮಾರಂಭದಲ್ಲಿ ಬೆಂಗಳೂರಿನಿಂದ ಮೊಬೈಲ್ ಮುಖಾಂತರ ಅವರು ಸಂದೇಶ ನೀಡಿ ಮಾತನಾಡಿದರು.

ಕರ್ನಾಟಕ ರಾಜ್ಯ ಜಾನಪದದ ತವರಾಗಿದೆ. ಎಲ್ಲ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ತಾಯಿಬೇರು ಜಾನಪದ. ಮನುಷ್ಯನ ಎಲ್ಲ ಹಂತಗಳಲ್ಲಿ, ಜನಮಾನಸದಲ್ಲಿ ಜಾನಪದ ಹಾಸು ಹೊಕ್ಕಾಗಿದೆ. ಮನುಷ್ಯ ಅಧುನಿಕತೆಗೆ ಎಷ್ಟೇ ಒಗ್ಗಿಕೊಂಡರೂ ಜಾನಪದ ಅತೀ ಮಹತ್ವದ ಕ್ಷೇತ್ರವಾಗಿದೆ. ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತವಾಗದೇ ಅದು ಈಗಲೂ ಉಳಿದುಕೊಂಡಿದ್ದು, ಮಾನವೀಯ ಮೌಲ್ಯ ಬೆಳೆಸುವುದರಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದ ಅವರು, ಕಲ್ಯಾಣ ಕರ್ನಾಟಕದ ಎಲ್ಲ ಜಾನಪದ ಸಾಹಿತಿ, ಕಲಾವಿದರ ಕಾರ್ಯಕ್ರಮಕ್ಕೆ ಕೆಕೆಆರ್‌ಡಿಬಿ ಯಿಂದ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಮಾತನಾಡಿ, ಜೀವ ವಿಕಾಸದಲ್ಲಿ ಜಾನಪದ ಪ್ರಮುಖ ಪಾತ್ರ ವಹಿಸುತ್ತದೆ. ಅಮ್ಮನ ಲಾಲಿ ಹಾಡಿನಿಂದ ಮನುಷ್ಯ ಮಣ್ಣಾಗುವ ತನಕ ಜಾನಪದವಿದೆ. ನೈತಿಕತೆ ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಜಾನಪದ ನೈತಿಕತೆಯ ಅಸ್ತ್ರವಾಗಿದೆ ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಒಣಕೆಯಿಂದ ಭತ್ತ ಕುಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮಕ್ಕೆ ಮುಂಚೆ ಭವ್ಯವಾದ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಕಲಬುರಗಿ ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ್ ಹೂಗಾರ್, ಜಾನಪದ ಅಕಾಡೆಮಿ ಸದಸ್ಯ ವಿಜಯುಕುಮಾರ್ ಸೋನಾರೆ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ, ಹಲತುಂಬಿ ಮೂರ್ತಿ, ಮಂಜುನಾಥ್ ರಾಮಣ್ಣ, ಮೆಹಬೂಬ್ ಕಿಲ್ಲೇದಾರ್, ಶಿವಮೂರ್ತಿ ಭೀಮಬಾಯಿ, ಡಾ.ನಿಂಗಪ್ಪ ಮುದೆನೂರ್, ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡೆಮಿ ಲೆಕ್ಕಾಧಿಕಾರಿ ಸುರೇಶ್ ನಾಯ್ಕ್, ಎನ್.ನಮ್ರತಾ ಹಾಗೂ ಬಸವರಾಜ್ ಧನ್ನೂರ್ ಸೇರಿದಂತೆ ಅನೇಕ ಜಾನಪದ ಕಲಾವಿದರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News