ಬೀದರ್: ಹೋಳಿ ಆಚರಿಸಿ ಸ್ನಾನಕ್ಕೆ ಹೋದ ಯುವಕ ಕೆರೆಯಲ್ಲಿ ಮುಳುಗಿ ಮೃತ್ಯು

ಬೀದರ್ : ಹೋಳಿ ಹಬ್ಬದಂದು ಬಣ್ಣದ ಆಟವಾಡಿ ನಂತರ ಕರೆಯಲ್ಲಿ ಈಜಲು ಹೋದ ಯುವಕನೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಹುಲಸೂರ ಪೊಲೀಸ್ ಠಾಣೆ ವ್ಯಾಪ್ತಿಯ ಬೇಲೂರ್ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬೇಲೂರ್ ಗ್ರಾಮದ ನಿವಾಸಿ ಆಕಾಶ್ (22) ಮೃತಪಟ್ಟ ಯುವಕನಾಗಿದ್ದಾನೆ.
ಮೃತ ಯುವಕ ಆಕಾಶ್ ಹೋಳಿ ಹಬ್ಬದ ಪ್ರಯುಕ್ತ ಬಣ್ಣದ ಆಟವಾಡಿದ ನಂತರ ಗೆಳೆಯರ ಜತೆಗೂಡಿ ಬೇಲೂರ್ ಗ್ರಾಮದ ಸಮೀಪವಿರುವ ವೀರಭದ್ರೇಶ್ವರ್ ಕೆರೆಯಲ್ಲಿ ಸ್ನಾನ ಮಾಡಲು ಹೋಗಿದ್ದನು. ಈತನಿಗೆ ಈಜು ಬರುತ್ತಿರಲಿಲ್ಲ. ಹಾಗಾಗಿ ಕೆರೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ತಿಳಿದು ಹುಲಸುರ್ ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಹುಲಸುರ್ ತಹಸೀಲ್ದಾರ್ ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನೊಂದಿಗೆ ಶುಕ್ರವಾರ ರಾತ್ರಿವರೆಗೆ ಶೋಧ ಕಾರ್ಯ ನಡೆಸಿದ್ದರು. ಆದರೆ ಮೃತದೇಹ ಸಿಗದ ಕಾರಣ ಇಂದು ಮಹಾರಾಷ್ಟ್ರ ರಾಜ್ಯದ ನಾಂದೇಡ್ ನಗರದಿಂದ ಪರಿಣಿತರನ್ನು ಕರೆಸಿ ಶೋಧ ಕಾರ್ಯ ಮುಂದುವರಿಸಿದ್ದರು. ಕೊನೆಗೆ ಇಂದು ಸುಮಾರು ಸಾಯಂಕಾಲ 4 ಗಂಟೆಗೆ ಕೆರೆಯಿಂದ ಮೃತದೇಹ ಹೊರ ತೆಗೆದಿದ್ದಾರೆ ಎಂದು ಗೊತ್ತಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಹುಲಸುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.