ಬೀದರ್: ಜಿಲ್ಲೆಯಲ್ಲಿ 9 ಕುಸುಬೆ ಖರೀದಿ ಕೇಂದ್ರ ಪ್ರಾರಂಭ; ಕ್ವಿಂಟಲ್ ಗೆ 5,940 ರೂ. ನಿಗದಿ

ಬೀದರ್ : ರೈತರಿಂದ ಎಫ್‌ಎಕ್ಯೂ ಗುಣಮಟ್ಟದ ಕುಸುಬೆ ಉತ್ಪನ್ನವನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲು ಜಿಲ್ಲೆಯಲ್ಲಿ ಒಟ್ಟು 9 ಖರೀದಿ ಕೇಂದ್ರಗಳು ಪ್ರಾರಂಭ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2024-25ನೇ ಸಾಲಿಗೆ ಭಾರತ ಸರ್ಕಾರವು ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದಿರುವ ಎಫ್‌ಎಕ್ಯೂ ಗುಣಮಟ್ಟದ ಕುಸುಬೆಯನ್ನು ಪ್ರತಿ ಕ್ವಿಂಟಾಲಿಗೆ 5,940 ರೂ. ದರದಲ್ಲಿ ಬೆಂಬಲ ಬೆಲೆ ಮಾರ್ಗಸೂಚಿ ಅನ್ವಯ ರೈತರಿಂದ ಖರೀದಿಸಲು ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳ ನಿಯಮಿತ (ಕೆಓಎಫ್) ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿ, ರಾಜ್ಯ ಸರ್ಕಾರ ಆದೇಶಿಸಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ಬೀದರ ಹಾಗೂ ಟಾಸ್ಕ್ಫೋರ್ಸ್ ಸಮಿತಿಯ ಜಿಲ್ಲಾಧ್ಯಕ್ಷ ಅವರ ಸಮ್ಮುಖದಲ್ಲಿ ಇಂದು ಜರುಗಿದ ಸಭೆಯ ನಡವಳಿಗಳ ಪ್ರಕಾರ ಈ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಕುಸುಬೆ ಖರೀದಿ ಕೇಂದ್ರಗಳ ವಿವರ: ಔರಾದ್ (ಬಾ) ತಾಲ್ಲೂಕಿನ ಕಮಲನಗರ್ ಹಾಗೂ ಔರಾದ್ (ಬಾ) ಪಿ.ಎ.ಸಿ.ಎಸ್. ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪೂರ್, ಮೂಡಬಿ ಹಾಗೂ ಗಡಿಗೌಡಗಾಂವ್ ಪಿ.ಎ.ಸಿ.ಎಸ್., ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಹಾಗೂ ಕೋಣ ಮೇಳಕುಂದಾ ಪಿ.ಎ.ಸಿ.ಎಸ್., ಬೀದರ್ ತಾಲ್ಲೂಕಿನ ಜನವಾಡಾ ಪಿ.ಎ.ಸಿ.ಎಸ್. ಹಾಗೆಯೇ ಹುಮನಾಬಾದ್ ತಾಲ್ಲೂಕಿನ ಚಿಟಗುಪ್ಪಾ ಪಿ.ಎ.ಸಿ.ಎಸ್. ನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರ ಆದೇಶ ಹೊರಡಿಸಿದ ದಿನಾಂಕದಿಂದ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗಧಿಪಡಿಸಲಾಗಿದೆ. ಖರೀದಿ ಪ್ರಕ್ರಿಯೆಯಲ್ಲಿ ರೈತರು ಪ್ರತಿ ಎಕರೆಗೆ ಗರಿಷ್ಠ 5 ಕ್ವಿಂಟಾಲ್ ನಂತೆ ಹಾಗೂ ಪ್ರತಿ ರೈತರಿಗೆ ಗರಿಷ್ಠ 20 ಕ್ವಿಂಟಾಲ್ ನಂತೆ ಎಫ್‌ಎಕ್ಯೂ ಗುಣಮಟ್ಟದ ಕುಸುಬೆ ಉತ್ಪನ್ನ ಮಾರಾಟ ಮಾಡಬಹುದಾಗಿದೆ. ಖರೀದಿ ಕೇಂದ್ರಗಳು ಲಾಗ್ ಇನ್ ಕ್ರೆಡೆನ್ಸಿಯಲ್ಸ್ ಗಳು ಪಡೆದುಕೊಳ್ಳಬೇಕು. ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದ ಮೇಲೆ ನೋಂದಣಿ ಮಾಡಿಕೊಳ್ಳಲು ಇಚ್ಛಿಸುವ ರೈತರು ಸಮೀಪದ ಖರೀದಿ ಕೇಂದ್ರಗಳಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ನಂತರ ತಮ್ಮ ಕುಸುಬೆ ಉತ್ಪನ್ನವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಮಾರಾಟ ಮಾಡಿ ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.