ಬೀದರ್ | ಎಮ್‌ಜಿಎನ್‌ಆರ್‌ಇಜಿ ಸಹಾಯಕ ನಿರ್ದೇಶಕರ ವಿರುದ್ಧ ಸುಳ್ಳು ಆರೋಪ ; ದಲಿತ ಸಂಘಟನೆ ಒಕ್ಕೂಟ ಖಂಡನೆ
ಬೀದರ್ : ಬಸವಕಲ್ಯಾಣ ತಾಲೂಕಿನ ಎಮ್‌ಜಿಎನ್‌ಆರ್‌ಇಜಿ ಸಹಾಯಕ ನಿರ್ದೇಶಕ ಸಂತೋಷ್ ಚೌಹಾಣ ಅವರ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ದಲಿತ ಸಂಘಟನೆ ಒಕ್ಕೂಟ ಖಂಡಿಸಿದೆ.
ಇಂದು ತಾಲ್ಲೂಕಿನ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸಂತೋಷ್ ಚವ್ಹಾಣ ಅವರ ವಿರುದ್ಧ ಉದ್ದೇಶಪೂರ್ವಕವಾಗಿ, ವೈಯಕ್ತಿಕ ದ್ವೇಷ ಇಟ್ಟುಕೊಂಡು ರಾಜಕೀಯ ಪಕ್ಷಗಳಿಂದ ಸುಳ್ಳು ಆರೋಪ ಮಾಡಿ ಕಿರುಕುಳ ನೀಡಲಾಗುತ್ತಿದೆ. ಅವರು 2025-29ನೇ ಸಾಲಿನ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡಿದ್ದರಿಂದ ಇವರ ಆಯ್ಕೆ ಸಹಿಸದೇ ಇವರ ವಿರುದ್ಧ ಉದ್ದೇಶಪೂರ್ವಕವಾಗಿ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.
ಕೆಲವು ರಾಜಕೀಯ ಪಕ್ಷಗಳು ಹಾಗೂ ಸ್ವಹಿತಾಸಕ್ತಿಗಾಗಿ ನಡೆಸುತ್ತಿರುವ ಸಂಘಟನೆಗಳ ನಾಗರೀಕರು ಸೇರಿಕೊಂಡು ಸಂತೋಷ್ ಚವ್ಹಾಣ ಅವರ ವಿರುದ್ಧ ಮೇಲಾಧಿಕಾರಿ ಹಾಗೂ ರಾಜಕೀಯ ಮುಖಂಡರಿಗೆ ಪದೇ ಪದೇ ವರ್ಗಾವಣೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗುತ್ತಿದೆ. ಸಂತೋಷ್ ಚವ್ಹಾಣ ಅವರು ಒಬ್ಬ ನಿಷ್ಠಾವಂತ, ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಆಗಿರುವುದರಿಂದ ಕೆಲವೊಂದು ಭ್ರಷ್ಟಾಚಾರಿಗಳಿಗೆ ಇದು ನುಂಗಲಾರದ ತುತ್ತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿ ಮತ್ತು ರಾಜಕಾರಣಿಗಳು ಈ ರೀತಿಯ ದ್ವೇಷವಿಟ್ಟುಕೊಂಡು ಸಂತೋಷ್ ಚವ್ಹಾಣ ಅವರ ವರ್ಗಾವಣೆಗಾಗಿ ಸಲ್ಲಿಸಿರುವ ಮನವಿ ಪತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಪಿಂಟು ಕಾಂಬಳೆ, ದತ್ತಾತ್ರೇಯ ಸೂರ್ಯವಂಶಿ, ಮಹಾದೇವ್ ಗಾಯಕವಾಡ್, ನವನಾಥ್ ರಾಠೋಡ್, ಗೌತಮ್ ಜಾಂತ್ಯೆ, ವಿಜಯಕುಮಾರ್ ಡಾಂಗೆ, ಸುರೇಶ್ ಮೋರೆ, ಸಂದಿಪ್ ಮುಕಿಂದೆ, ದಶರಥ್ ಕೋಟಮಾಳೆ, ಶ್ರೀನಿವಾಸ್ ಕಾಂಬಳೆ, ನಿತ್ಯಾನಂದ್ ಮಂಠಾಳಕರ್, ಮಹೇಶ ಶಿಂಧೆ, ಕಿಶೋರ್ ಸೂರ್ಯವಂಶಿ, ಪ್ರಶಾಂತ್ ಶಿಂಧೆ, ಉಮೇಶ್ ರಾಠೋಡ್, ಮರಾಠಾ ಸಮಾಜದ ಮುಖಂಡ ರಾಹುಲ್, ಬಾಳಾ ಅಷ್ಠೆ, ಮತ್ತು ಲಿಂಗಾಯತ ಸಮಾಜದ ಮುಖಂಡ ಸಂತೋಷ ಉಸ್ತುರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.