ಬೀದರ್ | ಪರಿಸರ ಸ್ವಸ್ಥ ಹಾಗೂ ಸುಂದರವಾಗಿರಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ : ವಿಜಯಕುಮಾರ್
ಬೀದರ್ : ಸ್ವಚ್ಛತೆಗೆ ಮೊದಲ ಆದ್ಯತೆ ನಿಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಚ್ಛತೆಯ ಅರಿವು ಹೊಂದಬೇಕು. ಪರಿಸರ ಸ್ವಸ್ಥ ಮತ್ತು ಸುಂದರವಾಗಿರಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ ಎಂದು ಬೆಂಗಳೂರಿನ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ತರಬೇತಿ ವಿಕ್ಷಕ ವಿಜಯಕುಮಾರ್ ಹೇಳಿದರು.
ಯದಲಾಪುರ ಗ್ರಾಮದಲ್ಲಿ ಬುಧವಾರ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಜಿಲ್ಲಾ ಪಂಚಾಯತ್, ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆ ಹಾಗೂ ಯದಲಾಪುರ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಗ್ರಾ.ಪಂ ಸದಸ್ಯ ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೆ ನವಿಕರಿಸಬಹುದಾದ ಇಂಧನ, ಮಳೆನೀರು ಕೊಯ್ಲು, ಘನ ತ್ಯಾಜ್ಯ ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸದ ಬುಟ್ಟಿಯಲ್ಲಿ ಹಾಕಬೇಕು. ಹಸಿ ಕಸ, ಒಣ ಕಸ, ಪ್ಲಾಸ್ಟಿಕ್ ವಸ್ತುಗಳು ಹಾಗೂ ಘನ ವಸ್ತುಗಳು ವಿಂಗಡಣೆ ಮಾಡಿ ಮನೆ ಬಳಿ ಬರುವ ಸ್ವಚ್ಛತಾಗಾರ ಸಿಬ್ಬಂದಿಗೆ ಹಸ್ತಾಂತರಿಸಬೇಕು ಎಂದು ಅವರು ತಿಳಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನೀತಾ ಬನ್ನೇರ್ ಮಾತನಾಡಿ, ಪ್ರತಿಯೊಬ್ಬರು ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಮನೆಯ ಬಚ್ಚಲಿನ ನೀರನ್ನು ರಸ್ತೆಗೆ ಬಿಡದೆ ಮನೆಯ ಅಕ್ಕ-ಪಕ್ಕ ಮತ್ತು ಮನೆಯ ಮುಂದೆ-ಹಿಂದೆ ಸ್ವಚ್ಛತೆ ಕಾಪಾಡಿಕೊಳ್ಳಿ. ನಿಮ್ಮ ಜಾಗ ಇರುವಲ್ಲಿ ಬಚ್ಚಲು ಗುಂಡಿಯ ಇಂಗು ತೊಟ್ಟಿಗಳನ್ನು ನಿರ್ಮಿಸಿಕೊಳ್ಳಿ. ನೀರನ್ನು ಭೂಮಿಗೆ ಇಂಗಿಸುವ ಕೆಲಸವಾಗಬೇಕು ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಜಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ರಿಯಾಜಪಾಶಾ ಕೊಳ್ಳೂರ್, ಪ್ರಕಾಶ್ ಡೋಳೆ, ದಿಲೀಪ್ ಮೊಘಾ, ಆನಂದ್ ಪೌಲ್, ಶಿವಕುಮಾರ್, ಮಹಾದೇವಿ ವಾರೀಕ್ ಹಾಗೂ ಭಾಗ್ಯಜ್ಯೋತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.