ಬೀದರ್ | ಚೀಲದಲ್ಲಿ ಹಸುಗೂಸು ಬಿಟ್ಟು ಹೋದ ಮಹಿಳೆ
ಬೀದರ್ : ಮಹಿಳೆಯೊಬ್ಬಳು ಮೈಕೊರೆವ ಚಳಿಯಲ್ಲಿ ಒಂದು ಚೀಲದಲ್ಲಿ ಹಸುಗೂಸನ್ನು ತಂದು ಬಿಟ್ಟು ಹೋದ ಹೃದಯ ವಿದ್ರಾವಕ ಘಟನೆ ಭಾಲ್ಕಿ ತಾಲೂಕಿನ ರುದನೂರ್ ಗ್ರಾಮದಲ್ಲಿ ನಡೆದಿದೆ.
ಜ.5ರ ರಾತ್ರಿ ಸುಮಾರು 1 ಗಂಟೆಗೆ ಮಹಿಳೆಯೊಬ್ಬಳು ಆವಾಗಲೇ ಹುಟ್ಟಿದ ಮಗುವನ್ನು ಒಂದು ಚೀಲದಲ್ಲಿ ತಂದು ಬಿಟ್ಟು ಹೋಗಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಹಿಳೆಯು ಚೀಲದಲ್ಲಿ ಮಗುವನ್ನು ತರುತಿದ್ದು ಸ್ಪಷ್ಟವಾಗಿ ಕಾಣುತ್ತಿದೆ. ಅದು ನಿನ್ನೆ ಬೆಳ್ಳಂಬೆಳಗ್ಗೆ ಗ್ರಾಮದ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಮಸೀದಿ ಕಾಂಪೌಂಡ್ ಪಕ್ಕದಲ್ಲಿ ಪ್ರತ್ಯಕ್ಷವಾಗಿದ್ದು, ಗಂಡು ಮಗು ಎಂದು ತಿಳಿದು ಬಂದಿದೆ.
ಬೆಳಗ್ಗೆ ಮಗುವನ್ನು ನೋಡಿದ ಗ್ರಾಮಸ್ಥರು ಹಸುಗೂಸನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದೆ. ಸ್ಥಳಕ್ಕೆ ಧನ್ನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸದ್ಯ ಪೊಲೀಸರು ಹಸುಗೂಸು ಬಿಟ್ಟು ಹೋದ ಮಹಿಳೆಯನ್ನು ಪತ್ತೆ ಹಚ್ಚಲು ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.