ಬೀದರ್ | ಕನ್ನಡ ಭವನದಲ್ಲಿ ವಿದ್ಯಾರ್ಥಿಗಳ ಅಧ್ಯಯನ ಕೇಂದ್ರ ಉದ್ಘಾಟನೆ
ಬೀದರ್ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಕನ್ನಡ ಭವನದಲ್ಲಿ ವಿದ್ಯಾರ್ಥಿಗಳ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಲಾಯಿತು.
ಇಂದು ನಗರದ ಕನ್ನಡ ಭವನದಲ್ಲಿ ಭಾಲ್ಕಿ ಹೀರೆಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು ವಿದ್ಯಾರ್ಥಿಗಳ ಅಧ್ಯಯನ ಕೇಂದ್ರ ಉದ್ಘಾಟಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ, ಅವರಲ್ಲಿ ಓದುವ ಹವ್ಯಾಸ ಹೆಚ್ಚಿಸುವ ಸದುದ್ದೇಶದಿಂದ ಕನ್ನಡ ಭವನದಲ್ಲಿ ಈ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಆಶಯ ಮಾತುಗಳನ್ನಾಡಿದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಕನ್ನಡ ಭವನದ ಈ ಸುಂದರ ಪರಿಸರದಲ್ಲಿ ನಾವು ಅಧ್ಯಯನ ಕೇಂದ್ರ ಆರಂಭಿಸಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಈ ಅಧ್ಯಯನ ಕೇಂದ್ರದ ಸದುಪಯೋಗ ಪಡೆದುಕೊಂಡು ಉನ್ನತ ಮಟ್ಟದಲ್ಲಿ ಬೆಳೆದು, ಉತ್ತಮವಾದ ಜೀವನ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ಹೆಚ್.ಕೆ.ಇ.ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ರಜನಿಶ್ ವಾಲಿ, ವಿಕಾಸ ಅಕಾಡೆಮಿ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಬಸವಕಲ್ಯಾಣ ತಹಶೀಲ್ದಾರ್ ದತ್ತಾತ್ರೆಯ ಗಾದಾ ಹಾಗೂ ಹುಲಸೂರು ತಹಶೀಲ್ದಾರ್ ಶಿವಾನಂದ್ ಮೇತ್ರೆ ಅವರು ವಿದ್ಯಾರ್ಥಿಗಳ ಅಧ್ಯಯನ ಕೇಂದ್ರಕ್ಕೆ ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಟಿ.ಎಂ.ಮಚ್ಚೆ ವಂದಿಸಿದರು. ಕೋಶಾಧ್ಯಕ್ಷ ಶಿವಶಂಕರರ್ ಟೊಕರೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.