ಬೀದರ್ | ಪ್ರಿಯಾಂಕ್ ಖರ್ಗೆ ಸೇರಿ ನಾಲ್ಕು ಸಚಿವರನ್ನು ಸಂಪುಟದಿಂದ ಕೈ ಬಿಡಲು ಒತ್ತಾಯಿಸಿ ಬಿಜೆಪಿ ಪ್ರತಿಭಟನೆ
ಬೀದರ್ : ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ರಾಜ್ಯ ಸಚಿವ ಸಂಪುಟದಿಂದ ನಾಲ್ಕು ಸಚಿವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.
ಇಂದು ನಗರದ ಬ್ರಿಮ್ಸ್ ಆಸ್ಪತ್ರೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ಮೂಲಕ ಬಂದ ನೂರಾರು ಜನ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಶೈಲೇಂದ್ರ ಬಿಲ್ದಾಳೆ ಮಾತನಾಡಿ, ಸಚಿನ್ ಪಾಂಚಾಳ ಅವರ ಡೇತ್ ನೋಟಲ್ಲಿ ರಾಜು ಕಪನೂರ್ ಜೊತೆ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೂಡ ಉಲ್ಲೇಖವಾಗಿದೆ. ರಾಜ್ಯ ಸರ್ಕಾರ ಇಲ್ಲಿವರೆಗೆ ಯಾರನ್ನೂ ಕೂಡ ಬಂಧನ ಮಾಡಲಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಪ್ರಿಯಾಂಕ್ ಖರ್ಗೆ ಅವರ ಹೆಸರು ಬಂದಿದ್ದಕ್ಕೆ ಬಂಧನವಾಗುತ್ತಿಲ್ಲವೋ ಅಥವಾ ಪೊಲೀಸ್ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಹೆದರಿ ಬಂಧನ ಮಾಡುತ್ತಿಲ್ಲವೋ ಎನ್ನುವುದು ಗೊತ್ತಾಗುತ್ತಿಲ್ಲ. ಇಲಾಖೆಯಲ್ಲಿ ನಿಷ್ಠಾವಂತ ಅಧಿಕಾರಿಗಳಿದ್ದು, ಅವರು ಸತ್ಯದಿಂದ ನಡೆದುಕೊಳ್ಳಬೇಕು. ಪ್ರಿಯಾಂಕ್ ಖರ್ಗೆ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ 700 ಕ್ಕಿಂತ ಹೆಚ್ಚು ಬಾಣಂತಿಯರು ಸಾವನಪ್ಪಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಕೂಡ ಒಂದುವರೆ ವರ್ಷದಲ್ಲಿ 46 ಬಾಣಂತಿಯರು ಸಾವನಪ್ಪಿದ್ದಾರೆ. ಇದಕ್ಕೆ ಮೂಲ ಕಾರಣ ರಾಜ್ಯದ ಭ್ರಷ್ಟ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇರ ಹೊಣೆಗಾರರಾಗಿದ್ದಾರೆ. ಬ್ಲಾಕ್ ಲಿಸ್ಟ್ ಗೆ ಸೇರಿಸಿದ ಕಂಪನಿಯಿಂದ ಔಷಧಿ ಖರೀದಿಸಿ ಬಾಣಂತಿಯರಿಗೆ ನೀಡಲಾಗಿದೆ ಎಂದು ದೂರಿದರು.
ರಾಜ್ಯದ್ಯಾಂತ ಭಾಣಂತಿಯರ ಹಾಗೂ ನವಜಾತ ಶಿಶುಗಳ ಸಾವುಗಳಿಗೆ ಕಾರಣರಾದ ದಿನೇಶ ಗುಂಡೂರಾವ್ ಹಾಗೂ ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮಿ ಶೇಬ್ಬಾಳ್ಕರ್ ಅವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ್ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ, ಕಿರಣ್ ಪಾಟೀಲ್, ಬಿಜೆಪಿ ಮುಖಂಡ ಈಶ್ವರ್ ಸಿಂಗ್ ಠಾಕುರ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷ ಉಲ್ಲಾಸಿನಿ ಮುಧಾಳೆ, ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹೇಮಾ ತುಕ್ಕಾರೆಡ್ಡಿ ಹಾಗೂ ಶಶಿ ಹೊಸಳ್ಳಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.