ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಕಾರಣ ಬಿಜೆಪಿಯೇ ಹೊರತು ಗ್ಯಾರಂಟಿಯಲ್ಲ : ಸತೀಶ್ ಜಾರಕಿಹೊಳಿ
ಬೀದರ್ : ಬಿಜೆಪಿ ಸರ್ಕಾರದ ಕೊನೆಯ ಎರಡು ವರ್ಷಗಳ ಅಧಿಕಾರವಧಿಯಲ್ಲಿ ಆರ್ಥಿಕ ನೆರವಿಲ್ಲದೆ ಕಾಮಗಾರಿ ಮಾಡಿರುವುದೇ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಕಾರಣವೇ ಹೊರತು ಗ್ಯಾರಂಟಿ ಯೋಜನೆಗಳ ಜಾರಿಯಿಂದಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯದ್ದೆ14 ಸಾವಿರ ಕೋಟಿ ರೂ. ವ್ಯತ್ಯಾಸ ಇದ್ದು, ಇದಕ್ಕೆ ಯಾವುದೇ ಅನುದಾನ ಇಲ್ಲ. ಹೀಗಾಗಿ ಮುಂದೆ ಹೆಚ್ಚುವರಿ ಹಣ ಕೇಳುತ್ತಾ ಕೇಳುತ್ತಾ, ಅದನ್ನು ಸರಿದೂಗಿಸಬೇಕಾದ ಅನಿವಾರ್ಯತೆಯಿದೆ. ಗ್ಯಾರಂಟಿ ಯೋಜನೆಗಳಿಗೆ ಬಜೆಟ್ನಲ್ಲಿ ಪ್ರತ್ಯೇಕವಾದ ಅನುದಾನ ಘೋಷಿಸಲಾಗಿದೆ. ಗ್ಯಾರಂಟಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಗುತ್ತಿಗೆದಾರರ ಬಿಲ್ ಬಾಕಿ ಸಮಸ್ಯೆ ಪ್ರತಿ ಜಿಲ್ಲೆಗಳಲ್ಲಿಯೂ ಇದೆ. ಅವರು ಕೆಲಸ ಮಾಡಿದ್ದರ ಬಿಲ್ ಪಾವತಿಸಬೇಕಿರುವುದು ನಿಜ. ಈ ಸಮಸ್ಯೆಗೆ ಮೂಲ ಕಾರಣವನ್ನು ಯಾರು ಹೇಳುತ್ತಿಲ್ಲ. ಹಣಕಾಸು ಇಲಾಖೆ ಯಾವ ಇಲಾಖೆಗೆ ಎಷ್ಟು ಹಂಚಿಕೆಯಾಗಿದೆ ಅಷ್ಟನ್ನೇ ನೀಡುತ್ತದೆ. ಆದರೆ ಬಿಜೆಪಿ ಸರ್ಕಾರ ಇದ್ದಾಗ ಅನುದಾನ ಇಲ್ಲದೆ ಕೆಲಸಗಳನ್ನು ಮಾಡಲಾಗಿದೆ. ಬಿಜೆಪಿ ಮಾಡಿದ ಆ ಎಡವಟ್ಟಿನಿಂದ ಬಿಲ್ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ಸಿನದ್ದು 60 ಪರ್ಸೆಂಟ್ ಸರ್ಕಾರ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಆರೋಪಿಸಿ, ಪ್ರಧಾನಿಗೆ ಪತ್ರ ಬರೆದಿದ್ದರು. ಆದರೆ ಎಚ್ಡಿಕೆ ಅವರ ಬಳಿ ಯಾವುದೇ ದಾಖಲೆಗಳಿಲ್ಲ. ಒಂದು ವೇಳೆ ದಾಖಲೆಗಳಿದ್ದರೆ ಮುಖ್ಯಮಂತ್ರಿಗಳಿಗೆ ನೀಡಲಿ ಎಂದು ತಿರುಗೇಟು ನೀಡಿದರು.
2028 ರ ನಂತರ ನಾನು ಸಿಎಂ ಆಕಾಂಕ್ಷಿ :
ಯುದ್ದಕ್ಕೂ ಮೊದಲು ಸೈನಿಕರನ್ನು ಸಿದ್ದತೆ ಮಾಡುತ್ತಾರೆ. ಹಾಗೆಯೇ ನಾವು ಕೂಡ ಸಿದ್ಧತೆ ನಡೆಸುತ್ತಿದ್ದೇವೆ. ಡಿನ್ನರ್ ಪಾರ್ಟಿಯ ಉದ್ದೇಶ ನಾನು ಸಿಎಂ ಆಗುವುದಕ್ಕೆ ಅಲ್ಲ. 2028ರ ನಂತರದಲ್ಲಿ ನಾನು ಸಿಎಂ ಆಗುವ ತಯಾರಿ ನಡೆದಿದೆ. ಇವಾಗ 2025 ರ ವರ್ಷ ಹಾಗಾಗಿ ನಾನು ಸಿಎಂ ಆಗುವುದು ಇವಾಗ ಅಲ್ಲ. ಇವಾಗ 140 ಜನ ಶಾಸಕರ ಆನೆ ಬಲದೊಂದಿಗೆ ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ತಾವು ಸಿಎಂ ಆಗುವ ವಿಚಾರ ಬಿಚ್ಚಿಟ್ಟರು.
ಡಿನ್ನರ್ ಮೀಟಿಂಗ್ ವಿಚಾರ ಪ್ರಸ್ತಾಪಿಸಿ, ನಾವ್ಯಾರು ಊಟಕ್ಕೆ ಹೊಗಬಾರದಾ? ಡಿನ್ನರ್ಗೆ ನಾವು ಹೋಗುತ್ತೇವೆ. ಮುಖ್ಯಮಂತ್ರಿ, ಅಧ್ಯಕ್ಷರು, ಜಿ.ಪರಮೇಶ್ವರ್ ಎಲ್ಲರೂ ಕರೆಯುತ್ತಾರೆ. ಡಿನ್ನರ್ ಪಾರ್ಟಿ ಬಗ್ಗೆ ಈಗಾಗಲೇ ಡಿಸಿಎಂ ಅವರೇ ಸ್ಪಷ್ಟನೆ ನೀಡಿದ್ದಾರೆ ಎಂದರು.
ಸಚಿನ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡುತ್ತಾ, ಸಚಿನ್ ಪಾಂಚಾಳ್ ಅವರ ಡೆತ್ ನೋಟ್ ನಲ್ಲಿ ನೇರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಇಲ್ಲ. ಬದಲಾಗಿ ಪ್ರಿಯಾಂಕ್ ಅವರ ಆಪ್ತ ಎಂದು ಉಲ್ಲೇಖಿಸಲಾಗಿದೆ. ಸಾವಿಗೆ ಕಾರಣ ಯಾರು, ಯಾವ ಬಿಲ್ ಬಾಕಿ ಉಳಿದಿತ್ತು ಮತ್ತು ಸಚಿನ್ ಗುತ್ತಿಗೆದಾರನೋ ಅಥವಾ ಇಲ್ಲವೋ ಎನ್ನುವುದೆಲ್ಲವೂ ಸಿಐಡಿ ತನಿಖೆಯಿಂದ ಬಹಿರಂಗವಾಗಲಿದೆ ಎಂದು ತಿಳಿಸಿದರು.