ಬೀದರ್ | ಮನೆ ಮಂಜೂರಾತಿ ತಿಳುವಳಿಕೆ ಪತ್ರ ವಿತರಿಸಿದ ಸಂಸದ ಸಾಗರ್ ಖಂಡ್ರೆ
ಬೀದರ್ : ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಯೋಗದ 2024-25 ವರ್ಷದ ಪಿ.ಎಂ.ಎ.ವೈ (ಜಿ) ಮನೆ ಮಂಜೂರಾತಿ ಪಡೆದ ಫಲಾನುಭವಿಗಳಿಗೆ ಸಂಸದ ಸಾಗರ್ ಖಂಡ್ರೆ ಅವರು ಭಾಲ್ಕಿಯಲ್ಲಿ ಮನೆ ಮಂಜೂರಾತಿ ತಿಳುವಳಿಕೆ ಪತ್ರ ವಿತರಿಸಿದರು.
ತಿಳುವಳಿಕೆ ಪತ್ರ ವಿತರಿಸಿ ಮಾತನಾಡಿದ ಅವರು, ನಾವು ಫಲಾನುಭವಿಗಳಿಗೆ ಮನೆ ಮಂಜೂರಾತಿ ತಿಳುವಳಿಕೆ ಪತ್ರ ವಿತರಿಸುತ್ತಿದ್ದೇವೆ. ಪಿ.ಎಂ.ಎ.ವೈ (ಜಿ) ಯೋಜನೆಯ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಇಲ್ಲ. ಹಾಗಾಗಿ ಫಲಾನುಭವಿಗಳಿಗೆ ಯಾವುದೇ ರೀತಿಯ ವಂಚನೆಯಾಗಬಾರದು ಎನ್ನುವ ಕಾರಣಕ್ಕೆ ಈ ತಿಳುವಳಿಕೆ ಪತ್ರ ನೀಡಲಾಗುತ್ತಿದೆ ಎಂದು ಹೇಳಿದರು.
ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಯೋಗದಲ್ಲಿ ಬರುವ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1 ಲಕ್ಷ 20 ಸಾವಿರ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 1 ಲಕ್ಷ 75 ಸಾವಿರ ರೂ. ಮನೆ ನಿರ್ಮಿಸಿಕೊಳ್ಳಲು ನೀಡಲಾಗುತ್ತದೆ ಎಂದು ತಿಳಿಸಿದರು.
ಮಧ್ಯವರ್ತಿಗಳಿಗೆ ದುಡ್ಡು ನೀಡಬಾರದು ಎಂದು ಈಗಾಗಲೇ ಎಲ್ಲ ಫಲಾನುಭವಿಗಳಿಗೆ ತಿಳಿಸಿದ್ದೇವೆ. ಮೊದಲನೇ ಕಂತು ಬಂದ ತಕ್ಷಣವೇ ಮನೆ ಕಟ್ಟಲು ಪ್ರಾರಂಭ ಮಾಡುವ ಮೂಲಕ ನಿಮ್ಮ ಕನಸಿನ ಮನೆ ನೀವು ಕಟ್ಟಿಕೊಳ್ಳಬಹುದು ಎಂದು ಫಲಾನುಭವಿಗಳಿಗೆ ತಿಳಿ ಹೇಳಿದರು.
ನಮ್ಮ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಸಾವಿರಕ್ಕಿಂತಲೂ ಹೆಚ್ಚು ಮನೆಗಳು ಮಂಜೂರಾಗಿವೆ. ಇಂದು ಭಾಲ್ಕಿಯಲ್ಲಿ 250 ತಿಳುವಳಿಕೆ ಪತ್ರ ನೀಡುತಿದ್ದೇವೆ. ಕೆಲವೇ ದಿನಗಳಲ್ಲಿ ಇನ್ನು ಫಲಾನುಭವಿಗಳ ಪಟ್ಟಿ ತಯಾರಿಸಿ ಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಫಲಾನುಭವಿಗಳಿಗೆ ತಿಳುವಳಿಕೆ ಪತ್ರ ವಿತರಿಸುತ್ತೇವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಭಾಲ್ಕಿ ತಾಲೂಕಿನ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಚೌವ್ಹಾಣ, ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ್ ವಂಕೆ, ಕಾಂಗ್ರೆಸ್ ಮುಖಂಡ ವಿಲಾಸ್ ಮೋರೆ ಹಾಗೂ ಅಂಬಾದಾಸ್ ಕೋರೆ ಸೇರಿದಂತೆ ಫಲಾನುಭವಿಗಳ ಜೊತೆಗೆ ಅನೇಕರು ಉಪಸ್ಥಿತರಿದ್ದರು.