ಬೀದರ್ | ಕ್ಷಯ ರೋಗ ಮುಕ್ತ ಭಾರತಕ್ಕೆ ಕೈಜೋಡಿಸಿ : ಡಾ.ಗಿರೀಶ್ ಬದೋಲೆ

ಬೀದರ್ : ಭಾರತವನ್ನು ಕ್ಷಯ ರೋಗ ಮುಕ್ತಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಅವರು ಹೇಳಿದರು.
ಇಂದು ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ 2025 ರಲ್ಲಿ ದೇಶವನ್ನು ಸಂಪೂರ್ಣ ಕ್ಷಯ ರೋಗ ಮುಕ್ತವಾಗಿಸುವ ಘೋಷಣೆ ಮಾಡಿದೆ. ಈ ದಿಸೆಯಲ್ಲಿ ಕಾರ್ಯ ಚಟುವಟಿಕೆಗಳೂ ನಡೆದಿವೆ. ಕ್ಷಯ ರೋಗ ನಿರ್ಮೂಲನೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜತೆಗೆ ಸ್ಥಳೀಯ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂದಿಯ ಪಾತ್ರವೂ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ್ ನೀರಗುಡೆ ಅವರು ಮಾತನಾಡಿ, ಪ್ರಸಕ್ತ ವರ್ಷ ಕ್ಷಯ ರೋಗ ನಿಯಂತ್ರಣದಲ್ಲಿ ಜಿಲ್ಲೆಯು ಗಣನೀಯ ಪ್ರಗತಿ ಸಾಧಿಸಿದೆ. ಈವಾಗ ಹ್ಯಾಂಡ್ ಹೆಲ್ಡ್ ಕ್ಷ-ಕಿರಣ ಯಂತ್ರದೊಂದಿಗೆ ರೋಗಿಗಳು ಇರುವ ಗ್ರಾಮ, ಸಂತೆ, ಜಾತ್ರೆ, ಉತ್ಸವ ಮೊದಲಾದ ಕಡೆಗೆ ಹೋಗಿ ಕ್ಷಯ ರೋಗ ತಪಾಸಣೆ ಮಾಡಲಾಗುತ್ತಿದೆ. ರೋಗ ಕಂಡು ಬಂದಲ್ಲಿ ತಕ್ಷಣವೇ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪೌಷ್ಟಿಕ ಆಹಾರಕ್ಕಾಗಿ ಕಡು ಬಡ ರೋಗಿಗಳ ಖಾತೆಗೆ ಹಣ ಸಹ ಜಮೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ.ಅನಿಲಕುಮಾರ್ ಚಿಂತಾಮಣಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ 47,979 ಸಂಭಾವ್ಯ ಕ್ಷಯ ರೋಗಿಗಳ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 2,563 ಜನರಿಗೆ ಕ್ಷಯ ರೋಗ ಇರುವುದು ದೃಢಪಟ್ಟಿದೆ. 71 ಜನರಲ್ಲಿ ಎಚ್‍ಐವಿ ಜತೆಗೆ ಕ್ಷಯ ರೋಗ ಪತ್ತೆಯಾಗಿದೆ. 2022 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 2,824 ಹಾಗೂ 2023 ರಲ್ಲಿ 2,826 ಕ್ಷಯ ರೋಗಿಗಳು ಪತ್ತೆಯಾಗಿದ್ದರು. ಈ ವರ್ಷ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.
ಕ್ಷಯ ರೋಗ ಮುಕ್ತ ಗ್ರಾಮ ಪಂಚಾಯಿತಿ ಯೋಜನೆಯಡಿ ಹೆಡಗಾಪುರ, ಹಾರಕೂಡ, ಬ್ಯಾಲಹಳ್ಳಿ, ನಿಟ್ಟೂರ (ಬಿ), ಬೇನಚಿಂಚೋಳಿ, ಏಕಲೂರು, ಕೋಹಿನೂರು, ಲಾಡವಂತಿ, ಮುಡಬಿ, ಉಜಳಂಬ, ಡಾಕುಳಗಿ, ಮದರಗಾಂವ್, ಚಟ್ನಳ್ಳಿ, ಮಾಳೆಗಾಂವ್, ಖೇಣಿ ರಂಜೋಳ್, ರೇಕುಳಗಿ, ಬೆಳಕೇರಾ, ಮೀನಕೇರಾ ಗ್ರಾಮ ಪಂಚಾಯತಿಗಳನ್ನು ಕ್ಷಯ ರೋಗ ಮುಕ್ತ ಗ್ರಾಮ ಪಂಚಾಯತ್ ಗಳೆಂದು ಘೋಷಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಕಿರಣ್ ಪಾಟೀಲ್, ಡಾ. ರಾಜಶೇಖರ್ ಪಾಟೀಲ್, ಡಾ. ಶಂಕರೆಪ್ಪ ಬೊಮ್ಮಾ, ಡಾ. ದಿಲೀಪ್ ಡೊಂಗರೆ, ಟಿ.ಎಂ. ಮಚ್ಚೆ, ಸಂಜುಕುಮಾರ್ ನಾಗೂರೆ ಹಾಗೂ ಇತರರು ಇದ್ದರು.