ನಿರಂತರ ಅಧ್ಯಯನದಿಂದ ಜ್ಞಾನ ಸಂಪಾದಿಸಿದರೆ ಸಾಹಿತ್ಯವನ್ನು ಬೆಳೆಸಬಹುದು : ಎಂ.ಜಿ.ದೇಶಪಾಂಡೆ

ಬೀದರ್ : ನಿರಂತರ ಅಧ್ಯಯನದಿಂದ ಜ್ಞಾನ ಸಂಪಾದನೆ ಮಾಡಿದರೆ ಸಾಹಿತ್ಯವನ್ನು ಬೆಳೆಸಬಹುದಾಗಿದೆ ಎಂದು ಹಿರಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಅವರು ಅಭಿಪ್ರಾಯಪಟ್ಟರು.
ಇಂದು ನಗರದ ನೌಬಾದ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಆಯೋಜಿಸಿರುವ ಚಕೋರ ಸಾಹಿತ್ಯ ವಿಚಾರ ಎಂಬ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಇಂದು ಬೀದರ್ ನಲ್ಲಿ 300ಕ್ಕಿಂತ ಹೆಚ್ಚು ಕವಿ, ಸಾಹಿತಿಗಳಿದ್ದಾರೆ. ಈಗಿನ ಸಾಹಿತಿಗಳು ಹೆಚ್ಚಾಗಿ ಕವಿತೆಗಳು ಬರೆಯುತ್ತಿದ್ದಾರೆ. ಅವರು ಕಥೆ, ಕಾದಂಬರಿಗಳು ಬರೆಯಬೇಕು. ಓದು ಮತ್ತು ಬರವಣಿಗೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಡಾ.ಚಂದ್ರಕಲಾ ಬಿದರಿ ಅವರು ಮಾತನಾಡಿ, ಯಾವುದೇ ಭಾಷೆ ಉಳಿದು ಬೆಳೆಯಬೇಕಾದರೆ ಅದು ನಿರಂತರವಾಗಿ ಚಲನೆಶೀಲತೆಯಲ್ಲಿರಬೇಕು. ಭಾಷೆಯ ಬೆಳವಣಿಗೆಯ ಬಗ್ಗೆ ಇರುವಷ್ಟು ಸಂಘಟನೆಗಳು ಬೇರೆಲ್ಲಿಯಾದರು ಇದ್ದಾವಾ ಎಂದು ನಾವು ಯೋಚನೆ ಮಾಡಬೇಕಾಗುತ್ತದೆ. ಆದರೂ ಭಾಷೆಯ ಉಳಿವಿನ ಬಗ್ಗೆ ಬಹಳಷ್ಟು ಚಿಂತನೆ ಮಾಡಬೇಕಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಂಡು ಅದರ ಜೊತೆಗೆ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಬರೆಯುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಇತ್ತೀಚಿಗೆ ಓದು, ಬರಹ ಕಡಿಮೆಯಾಗಿ, ಮೊಬೈಲ್ ಬಳಕೆ ಹೆಚ್ಚಾಗಿದೆ. ಓದು, ಬರಹ ರೂಢಿಸಿಕೊಳ್ಳುವುದರ ಮೂಲಕ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರೊ.ಜಯಶ್ರೀ ಪ್ರಭಾ ಅವರು ಮಾತನಾಡಿ, ಭೂಮಿಗೆ ಬಿದ್ದ ಬೀಜ ಯಾವತ್ತಾದರೂ ಫಲ ನೀಡುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ಬಿಟ್ಟು ಓದು, ಬರಹದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಒಂದು ಪುಸ್ತಕ ಜೊತೆಗಿದ್ದರೆ, ಒಂದು ನೂರು ಗೆಳೆಯರು ಜೊತೆಗೆ ಇದ್ದಂತೆ. ಹಾಗಾಗಿ ವಿದ್ಯಾರ್ಥಿಗಳು ಓದುವ ಮೂಲಕ ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಗನ್ನಾಥ ಹೆಬ್ಬಾಳೆ, ಡಾ.ಸಂಜೀವಕುಮಾರ್ ಅತಿವಾಳೆ, ಸ್ನೇಹಲತಾ ಗೌನಳ್ಳಿ, ರಾಜಕುಮಾರ್ ಅಲ್ಲೂರೆ, ಅಜಿತ್ ಎನ್.ನೇಳಗಿ, ಕರಿಯಪ್ಪ ಎನ್. ಹಾಗೂ ಮುಕುಂದರಾಜ್ ಸೇರಿದಂತೆ ಇನ್ನಿತರ ಸಾಹಿತಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.