ಬೀದರ್ | ಒಳಮೀಸಲಾತಿ ಜಾರಿ ಮಾಡದಿದ್ದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ : ಭಾಸ್ಕರ್ ಪ್ರಸಾದ್

Update: 2025-03-26 21:52 IST
Photo of Press meet
  • whatsapp icon

ಬೀದರ್ : ಏ.5 ರಂದು ಬಾಬು ಜಗಜೀವನರಾಮ್ ಅವರ ಜಯಂತಿ ಉತ್ಸವದ ಒಳಗೆ ಸರ್ಕಾರ ಒಳಮೀಸಲಾತಿ ಜಾರಿ ಮಾಡದಿದ್ದಲ್ಲಿ ವಿಧಾನಸೌಧದ ಮೆಟ್ಟಿಲು ಮೇಲೆ ನಮ್ಮ ಹೆಣಗಳು ನೋಡುವಿರಿ. ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಮಾದಿಗ ಹೋರಾಟ ಸಮನ್ವಯ ಸಮಿತಿಯ ರಾಜ್ಯ ಪ್ರಮುಖ ಭಾಸ್ಕರ್ ಪ್ರಸಾದ್ ಎಚ್ಚರಿಸಿದರು.

ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿ ಮಾಡುವುದಕ್ಕೆ ಮುಖ್ಯಮಂತ್ರಿಗಳು ಈಗಾಗಲೇ ಒಂದು ವಾರ ಗಡುವು ಕೇಳಿದ್ದಾರೆ. ಆದರೆ ನಾವು ಸರ್ಕಾರಕ್ಕೆ 12 ದಿವಸ ಸಮಯಾವಕಾಶ ನೀಡುತ್ತಿದ್ದೇವೆ. ಅಷ್ಟರೊಳಗೆ ಒಳಮೀಸಲಾತಿ ಜಾರಿಯಾಗಬೇಕು ಎಂದು ಆಗ್ರಹ ಮಾಡಿದರು.

ಪ್ರೊ. ಬಿ.ಕೃಷ್ಣಪ್ಪ ಅವರ ಸಮಾಧಿಯಿಂದ ಆರಂಭವಾದ ನಮ್ಮ ಪಾದಯಾತ್ರೆ ಬೆಂಗಳೂರಿನವರೆಗೆ ಸಾಗಿದೆ. ಮುನಿಯಪ್ಪ ಅವರು ಮೂರು ತಿಂಗಳ ಕಾಲಾವಕಾಶ ಕೇಳಿದ್ದರು. ಆದರೆ ಅದನ್ನು ನಾವು ಒಪ್ಪಲಿಲ್ಲ. ಹಾಗಾಗಿ ಸರ್ಕಾರ ಇವಾಗ ಒಂದು ವಾರದ ಗಡುವು ಕೇಳಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಂದೇ ದಿನದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾಡಲು ಹೊರಟಿದ್ದರು. ಮುಡಾ ಹಗರಣದಲ್ಲಿ ತಮ್ಮ ಮೈಮೇಲೆ ಆರೋಪ ಬಂದಿದೆ ಎಂದು ತರಾತುರಿಯಲ್ಲಿ ರಾತ್ರೋ ರಾತ್ರಿ 12 ನಿವೇಶನಗಳು ಸರ್ಕಾರಕ್ಕೆ ಹಿಂದಿರುಗಿಸಿದರು. ಆದರೆ ಒಳಮೀಸಲಾತಿ ಜಾರಿ ಮಾಡಲು ಇವರಿಗೇಕೆ ಕಾಲಾವಕಾಶಬೇಕು ಎಂದು ಪ್ರಶ್ನಿಸಿದರು.

ಈಗಾಗಲೇ ನಾಗಮೋಹನದಾಸ್ ಅವರ ಆಯೋಗ ಎರಡು ತಿಂಗಳು ವಿಳಂಬ ಮಾಡಿದೆ. ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ವರದಿ ಹಾಗೂ ಕಾಂತರಾಜ ವರದಿ ಪ್ರಕಾರ ಆದರೂ ಒಳಮೀಸಲಾತಿ ಜಾರಿ ಮಾಡಿ. ಇದೂ ಸಹ ಸಾಧ್ಯವಿಲ್ಲವೆಂದರೆ ಹೊಸ ಜಾತಿಗಳ ದತ್ತಾಂಶ ಕ್ರೂಢಿಕರಿಸಿ ಒಳಮೀಸಲಾತಿ ಜಾರಿ ಮಾಡಿ. ಆದರೆ ಕುಂಟು ನೆಪ ಹೇಳಿ ಕಾಲಾಹರಣ ಮಾಡಿದರೆ ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ದೇವಿದಾಸ್ ತುಮಕುಂಟೆ, ರಮೇಶ್ ಕಟ್ಟಿತೂಗಾಂವ್, ಕಲ್ಲಪ್ಪ ವೈದ್ಯ, ಸ್ವಾಮಿದಾಸ್ ಕೆಂಪೆನೋರ್, ಬಂಟಿ ದರ್ಬಾರೆ, ಪ್ರದೀಪ್ ಹೆಗಡೆ, ಪೀಠರ್ ಶ್ರೀಮಂಡಲ್, ಶಿವರಾಜ್ ನೆಲವಾಳಕರ್, ಡಾ. ಬಸವರಾಜ್ ಔರಾದೆ, ರಾಜಕುಮಾರ್ ಹಳ್ಳಿಖೇಡ, ಶಿವರಾಜ ಮುಗನೂರೆ ಹಾಗೂ ದಾವೀದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News