ಬೀದರ್ | ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿಯಲ್ಲಿ ಅಕ್ರಮ ಆರೋಪ : ಸೂಕ್ತ ತನಿಖೆಗೆ ಆಗ್ರಹ

ಬೀದರ್ : ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿಯಲ್ಲಿ ಬಹಳ ಗೊಂದಲ ಮತ್ತು ಆವ್ಯವಹಾರ ನಡೆದಿದೆ ಎಂದು ಯುವ ಕ್ರಾಂತಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ್ ಭೋರೆ ಅವರು ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಔರಾದ್ ಹಾಗೂ ಕಮಲನಗರ್ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ ಸಂಪೂರ್ಣವಾಗಿ ಅವ್ಯವಹಾರ ನಡೆದಿದೆ. ಇದನ್ನು ನಾವು ಖಂಡಿಸುತ್ತೇವೆ. ಹುದ್ದೆಗಳ ಆಯ್ಕೆಯ ಅಂತಿಮ ಪಟ್ಟಿಯಲ್ಲಿ ಕಡಿಮೆ ಅಂಕ ಪಡೆದಿರುವವರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ಹೆಚ್ಚು ಅಂಕಗಳಿಸಿದವರಿಗೆ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಅವರು, ಇದೇ ರೀತಿಯ ಅನ್ಯಾಯ ಜಿಲ್ಲಾದ್ಯಂತ ನಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಅರ್ಹ ಅಭ್ಯರ್ಥಿಗಳನ್ನು ಅಂಗನವಾಡಿ ಹುದ್ದೆಗಳಿಗೆ ನೇಮಕ ಮಾಡಬೇಕು. ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಯುವಕ್ರಾಂತಿಯ ರಾಜ್ಯ ಉಪಾಧ್ಯಕ್ಷ ಮಲ್ಲಿಕನಾಥ್ ಮಡಗೆ ಹಾಗೂ ಜಿಲ್ಲಾ ಉಪಾಧ್ಯಕ್ಷ ರಾಜಕುಮಾರ್ ಹಳ್ಳಿಖೆಡಕರ್ ಉಪಸ್ಥಿತರಿದ್ದರು.