ನಕಲಿ ದಾಖಲೆ ಸೃಷ್ಟಿಸಿ ಕನ್ನಡಿಗರಿಗೆ ಮೋಸ ಮಾಡಿದ ಶಾಸಕ ಪ್ರಭು ಚವ್ಹಾಣ್: ಸೋಮನಾಥ್ ಮುಧೋಳ್ ಆರೋಪ

ಬೀದರ್ : ಔರಾದ್ ನ ಶಾಸಕ ಪ್ರಭು ಚೌವ್ಹಾಣ್ ಅವರು ನೆರೆ ರಾಜ್ಯ ಮಹಾರಾಷ್ಟ್ರ ಮೂಲದವರಾಗಿದ್ದು, ಕರ್ನಾಟಕದಲ್ಲಿ ಬಂದು ನಕಲಿ ದಾಖಲೆ ಸೃಷ್ಟಿ ಮಾಡಿ ನಾಲ್ಕು ಬಾರಿ ಶಾಸಕರಾಗಿ ಕನ್ನಡಿಗರಿಗೆ ಮೋಸ ಮಾಡಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಮುಖಂಡ ಸೋಮನಾಥ್ ಮುಧೋಳ್ ಆರೋಪಿಸಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಭು ಚೌವ್ಹಾಣ್ ಅವರು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದು ನಕಲಿ ಜಾತಿ ಪ್ರಮಾಣ ಪತ್ರ ತಯಾರಿಸಿ 2008 ರಿಂದ ಇಲ್ಲಿಯವರೆಗೆ ಔರಾದ್ (ಬಿ) ಮೀಸಲು ಕ್ಷೇತ್ರದ ಶಾಸಕನಾಗಿ ಕನ್ನಡಿಗರ ಎಲ್ಲ ಹಕ್ಕುಗಳನ್ನು ಕಬಳಿಸಿದ್ದಾರೆ. ಅವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಇದುವರೆಗೆ ಪಡೆದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಅವರಿಂದ ಪುನಃ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಚೌವ್ಹಾಣ್ ಅವರು ತನ್ನ ಪ್ರಭಾವ ಬಳಸಿ ಇಲ್ಲಿಯ ತಹಶೀಲ್ದಾರ್ ರ ಮೂಲಕ ತನ್ನ ಹಾಗೂ ತನ್ನ ಕುಟುಂಬಸ್ಥರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಕನ್ನಡಿಗರಿಗೆ ಮೋಸ ಮಾಡಿದ್ದಾರೆ. 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಔರಾದ್ ಮೀಸಲು ವಿಧಾನಸಭಾ ಕ್ಷೇತ್ರದಿಂದ ನರಸಿಂಗ್ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಅವರ ನಾಮಪತ್ರ ಪರಿಶೀಲನೆ ದಿನದಂದು ಸೂಕ್ತ ದಾಖಲೆಗಳೊಂದಿಗೆ ನ್ಯಾಯವಾದಿಗಳ ಜೊತೆಯಲ್ಲಿ ಪ್ರಭು ಚವ್ಹಾಣ್ ಅವರ ನಾಮಪತ್ರಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಆಗಿನ ಚುನಾವಣಾಧಿಕಾರಿಗಳು ಆಕ್ಷೇಪಣೆಯ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಇದರಿಂದ ನರಸಿಂಗ್ ಅವರು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಆಯುಕ್ತರು ಹಾಗೂ ಮೇಲ್ಮನವಿ ಪ್ರಾಧಿಕಾರವು 2023ರಲ್ಲಿ ಪ್ರಭು ಚವ್ಹಾಣ್ ಅವರಿಗೆ ವಿಚಾರಣೆ ಸಭೆಯ ಸೂಚನಾ ಪತ್ರ ನೀಡಿ, ಅಗತ್ಯ ದಾಖಲೆ ಮತ್ತು ದಸ್ತಾವೇಜುಗಳೊಂದಿಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಪ್ರಭು ಚವ್ಹಾಣ್ ಅವರು ಇದನ್ನು ಪ್ರಶ್ನಿಸಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮಾ.17ರಂದು ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಾಲಯವು ಸರ್ಕಾರಕ್ಕೆ ಏ.28 ರ ಒಳಗಡೆ ಇದರ ಬಗ್ಗೆ ವರದಿ ಸಲ್ಲಿಸುವಂತೆ ಗಡುವು ನೀಡಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು 30 ದಿನಗಳ ಒಳಗಾಗಿ ಪ್ರಭು ಚೌವ್ಹಾಣ್ ಅವರ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿ, ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವ ಮೂಲಕ ಕನ್ನಡಿಗರಿಗೆ ನ್ಯಾಯ ಒದಗಿಸಿಕೊಡಬೇಕು. ಒಂದು ವೇಳೆ ಪ್ರಭು ಚವ್ಹಾಣ್ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬಂದ್ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಇತರೆ ಪ್ರಮುಖರಾದ ರವಿಸ್ವಾಮಿ ನಿರ್ಣಾ, ಸುಭಾಷ್ ಕೆನಾಡೆ, ನಿತೀಶ್ ಉಪ್ಪೆ, ಸೋಮನಾಥ್ ವರವಟ್ಟಿ (ಕೆ), ರಮೇಶ್ ಧೂಳಾ, ಚರಣಜೀತ್ ಆಣದೂರೆ, ವಿವೇಕ್ ಸ್ವಾಮಿ, ಶಾಮ್ ಮದನ ಹಾಗೂ ಧನರಾಜ್ ಸಾಂಗವಿಕರ್ ಸೇರಿದಂತೆ ಇತರರು ಇದ್ದರು.