ಬೀದರ್ | ತಂತ್ರಜ್ಞಾನ ಮುಂದುವರೆದು ಪೊಲೀಸ್ ಇಲಾಖೆಗೆ ಅನುಕೂಲವಾಗಿದೆ : ಘನಶಾಮ

ಬೀದರ್ : ಈ ಮೊದಲು ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನ ಇರಲಿಲ್ಲ. ಆದರೆ ಇವಾಗ ತಂತ್ರಜ್ಞಾನ ಮುಂದುವರೆದಿದ್ದರಿಂದ ಇಲಾಖೆಗೆ ಹೆಚ್ಚು ಅನುಕೂಲವಾಗಿದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಪಿಎಸ್ಐ ಘನಶಾಮ ಅವರು ತಿಳಿಸಿದರು.
ಇಂದು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದಿನ ನನ್ನದು ಅವಿಸ್ಮರಣೀಯ ದಿನವಾಗಿದೆ. ನಾನು ಪೋಲಿಸ್ ಇಲಾಖೆಯಲ್ಲಿ 35 ವರ್ಷ ಸೇವೆ ಸಲ್ಲಿಸಿದ್ದು ಸಾರ್ಥಕವಾಯಿತು. ಏಕೆಂದರೆ ನನ್ನನ್ನು ಗುರುತಿಸಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿಸಿದ್ದಕ್ಕೆ ಎಸ್ಪಿ ಪ್ರದೀಪ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿಗಳು ತಮ್ಮ ಆರೋಗ್ಯಕ್ಕಾಗಿ ದೂರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗಿದೆ. ಇದರಿಂದಾಗಿ ತುಂಬಾ ತೊಂದರೆಯಾಗುತ್ತಿದೆ. ಪೊಲೀಸ್ ವರೀಷ್ಠಾಧಿಕಾರಿಗಳು ಹತ್ತಿರದಲ್ಲಿರುವ ಆಸ್ಪತ್ರೆಯಲ್ಲಿ ನಮಗೆ ಚಿಕಿತ್ಸೆ ಪಡೆಯುವ ವ್ಯವಸ್ಥೆ ಮಾಡಬೇಕು ಎಂದು ಬೇಡಿಕೆ ಇಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಬಹಳಷ್ಟು ಕಲ್ಯಾಣ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಪೊಲೀಸ್ ಗೆಸ್ಟ್ ಹೌಸ್, ಟೆನಿಸ್ ಹಾಗೂ ಕ್ರಿಕೆಟ್ ಮೈದಾನ, ಉಚಿತ ಮೆಡಿಕಲ್ ಹೆಲ್ತ್ ಚೆಕಪ್ ಸೆಂಟರ್, ಪೊಲೀಸ್ ಜಿಮ್, ಪೊಲೀಸ್ ಗ್ರಂಥಾಲಯ, ಮೆಡಿಕಲ್ ಮತ್ತು ಶಿಕ್ಷಣಕ್ಕಾಗಿ ಸಹಾಯ ಧನ ಹಂಚಿಕೆ, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚಿನ ಅಂಕ ಗಳಿಸಿದ ಪೊಲೀಸರ ಮಕ್ಕಳಿಗೆ ಬಹುಮಾನ, ಪೊಲೀಸ್ ಕುಟುಂಬದವರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು, ನಿವೃತ್ತ ಅಧಿಕಾರಿ, ಸಿಬ್ಬಂದಿಯವರಿಗೆ ಪೊಲೀಸ್ ಸಬ್ಸಿಡಿ ಕ್ಯಾಂಟೀನ್ ಸೌಲಭ್ಯ ಹಾಗೂ ನಿವೃತ್ತ ಅಧಿಕಾರಿ, ಸಿಬ್ಬಂದಿಯವರಿಗೆ ಗುರುತಿನ ಚೀಟಿ ಸೌಲಭ್ಯ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೌಲಭ್ಯ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ನುಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಪೂಜಾರಿ, ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಜೊತೆಗೆ ಅವರ ಕುಟುಂಬಸ್ಥರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

