ಬೀದರ್ | 1949 ರ ಬಿ.ಟಿ ಕಾಯಿದೆ ರದ್ದು ಮಾಡಿ ಬುದ್ಧ ವಿಹಾರ ಬೌದ್ಧರಿಗೆ ನೀಡಲು ಆಗ್ರಹಿಸಿ ಪ್ರತಿಭಟನೆ

ಬೀದರ್ : 1949 ರ ಬಿ.ಟಿ ಕಾಯಿದೆ ರದ್ದು ಮಾಡಿ ಬಿಹಾರದ ಬೌದ್ಧಗಯಾದಲ್ಲಿರುವ ಬುದ್ಧ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ಒಪ್ಪಿಸಬೇಕು ಎಂದು ಬೌದ್ಧ ಭೀಕ್ಖು, ಭೀಕ್ಖುಣಿಯರ ಜಿಲ್ಲಾ ಸಮಿತಿ ಹಾಗೂ ಉಪಾಸಕ, ಉಪಾಸಕಿಯರ ಸಂಘವು ಆಗ್ರಹಿಸಿದೆ.
ಇಂದು ನಗರದ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಮೂಲಕ ಬಿಹಾರದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಿಹಾರದ ಬೋಧಗಯಾದಲ್ಲಿರುವ ಮಹಾಬೋಧಿ ಮಹಾವಿಹಾರವು ವಿಶ್ವದಾದ್ಯಂತ ಬೌದ್ಧರ ಪವಿತ್ರ ಸ್ಥಳವಾಗಿದ್ದು, ಇದು ಯುನೇಸ್ಕೊ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿದೆ. ಆದರೆ 1949 ರ ಬಿ.ಟಿ ಕಾಯಿದೆಯು ಲಕ್ಷಾಂತರ ಬೌದ್ಧರ ಹಕ್ಕು ಮತ್ತು ಘನತೆಯನ್ನು ಉಲ್ಲಂಘಿಸುತ್ತಿದೆ. ಇದರಿಂದಾಗಿ ಬೌದ್ಧರ ಮೂಲಭೂತ ಹಕ್ಕುಗಳು ದುರ್ಬಲಗೊಳಿಸುವುದಲ್ಲದೆ ಬುದ್ಧನ ಬೋಧನೆಗಳ ಪಾವಿತ್ರ್ಯತೆ ಮತ್ತು ಈ ತಾಣದ ಸಾಂಸ್ಕೃತಿಕ ಮಹತ್ವವನ್ನು ಅಗೌರವಗೊಳಿಸಲಾಗುತ್ತಿದೆ ಎಂದು ದೂರಲಾಗಿದೆ.
1949 ರ ಬಿ.ಟಿ ಕಾಯಿದೆಯಿಂದ ಮಹಾಬೋಧಿ ಮಹಾವಿಹಾರಗಳ ಆಡಳಿತವನ್ನು ಅಲ್ಲಿನ ಬೌದ್ಧೇತರರ ನಡೆಸುತ್ತಿದ್ದಾರೆ. ಸಂಪೂರ್ಣವಾಗಿ ಬೌದ್ಧಗಯಾದ ಬುದ್ಧ ವಿಹಾರ ಬ್ರಾಹ್ಮಣರ ನಿಯಂತ್ರಣದಲ್ಲಿದೆ. ಬೌದ್ಧರ ಧಾರ್ಮಿಕ ಹಕ್ಕು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
1949 ರ ಪ್ರಸ್ತುತ-ಬಿಟಿ ಕಾಯಿದೆಯ ತಕ್ಷಣದ ವಿಸರ್ಜನೆ ಮಾಡಿ, ಸ್ವತಂತ್ರ ಬೌದ್ಧ ನಿರ್ವಹಣಾ ಟ್ರಸ್ಟ್ ರಚನೆ ಮಾಡುವ ಮೂಲಕ ಬೌದ್ಧ ವಿಹಾರ ಬೌದ್ಧರಿಗೆ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆಣದೂರಿನ ಭಂತೆ ಧಮ್ಮಾನಂದ್ ಮಹಾಥೆರೊ, ಭಂತೆ ರೇವತ್ ಥೆರೊ, ಭಂತೆ ವರಜ್ಯೋತಿ, ಭಂತೆ ಜ್ಞಾನಸಾಗರ್ ಥೆರೊ, ಭಂತೆ ಧಮ್ಮಪಾಲ್ ಥೆರೊ, ಭಂತೆ ಸಂಘರಕ್ಖಿತ್, ಭಂತೆ ಧಮ್ಮ ಕೀರ್ತಿ, ಭಂತೆ ನವಪಾಲ್, ಭಂತೆ ಭೋಧಿರತ್ನ, ಭೀಕ್ಖುಣಿ ಸುಮನ್ ಆರ್ಯಾಜಿ, ಭೀಕ್ಕುಣಿ ಪ್ರಜಾಪತಿ ಗೌತಮಿ, ಭಂತೆ ಧಮ್ಮದೀಪ್ ಸೇರಿದಂತೆ ಅನೇಕ ಬೌದ್ಧ ಅನುಯಾಯಿಗಳು ಭಾಗವಹಿಸಿದ್ದರು.