ಬೀದರ್ | ಪವರ್ ಗ್ರೀಡ್ ನಲ್ಲಿ ಕಡಿಮೆ ಸಾಮರ್ಥ್ಯದ ಸ್ಪೋಟಕ ಬಳಸಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಕಮಲನಗರ ತಾಲ್ಲೂಕಿನ ಚಿಮ್ಮೇಗಾಂವ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಪವರ್ ಗ್ರೀಡ್ ನಲ್ಲಿ ಬೃಹತ್ ಮಟ್ಟದ ಸ್ಪೋಟಕ ಬಳಕೆ ಮಾಡುತ್ತಿದ್ದರಿಂದ ಬಾವಿ, ಕೊಳವೆ ಬಾವಿಯಲ್ಲಿನ ನೀರು ಬತ್ತುತ್ತಿದೆ. ಹಾಗಾಗಿ ಪವರ್ ಗ್ರೀಡ್ ನಲ್ಲಿ ಕಡಿಮೆ ಸಾಮರ್ಥ್ಯದ ಸ್ಪೋಟಕ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಸಾಯಂಕಾಲ ಪವರ್ ಗ್ರೀಡ್ ಉಪ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪವರ್ ಗ್ರೀಡ್ ಉಪ ಕೇಂದ್ರದ ಕಾಮಗಾರಿ ವೇಳೆ ಗುಂಡಿಗಳು ಅಗೆಯಲು ಸ್ಪೋಟಕ ಬಳಕೆ ಮಾಡಲಾಗುತ್ತಿದೆ. ಇದರಿಂದ ಅಕ್ಕ ಪಕ್ಕದ ಹಳ್ಳಿಗಳಲ್ಲಿನ ಕೊಳವೆ ಬಾವಿ, ತೆರೆದ ಬಾವಿಯ ನೀರು ಬತ್ತಿ ಹೋಗುತ್ತಿವೆ. ಹಾಗಾಗಿ ನೀರಿನ ಸಮಸ್ಯೆಯಾಗುತ್ತಿದ್ದು, ಕಡಿಮೆ ಸಾಮರ್ಥ್ಯದ ಸ್ಪೊಟಕಗಳನ್ನು ಬಳಕೆ ಮಾಡಿ ಗುಂಡಿಗಳನ್ನು ಅಗೆಯಬೇಕು ಎಂದು ತಿಳಿಸಿದರು.
ಇಲ್ಲಿನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಬೇಕು. ಚಿಮ್ಮೇಗಾಂವ್ ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಭೋಪಾಳಗಡ ಬೆಳಕೋಣಿ ಕೆರೆಯ ಹತ್ತಿರ ತೆರೆದ ಬಾವಿ ಕೊರೆದು ನೀರಿನ ವ್ಯವಸ್ಥೆ ಮಾಡಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪವರ್ ಗ್ರಿಡ್ ಕಾರ್ಪೋರೇಷನ್ ಲಿಮಿಟೆಡ್‌ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗಣೇಶ್, ತಹಶೀಲ್ದಾರ್ ಅಮೀತಕುಮಾರ್ ಕುಲಕರ್ಣಿ, ತಾ.ಪಂ. ಇಒ ಮಾಣಿಕರಾವ್ ಪಾಟೀಲ್, ಸಹಾಯಕ ಆಯುಕ್ತ ಮುಹಮ್ಮದ್ ಶಕೀಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಮಾಣಿಕರಾವ್, ಜೆಇ ಶಿವಕುಮಾರ್ ಕೌಟಗೆ, ನಾಡ ತಹಶೀಲ್ದಾರ್ ಸೋಮಶೇಖರ್, ಕಂದಾಯ ನಿರೀಕ್ಷಕ ಸಂಜುಕುಮಾರ್ ರಾಠೋಡ, ಪಿಡಿಓ ತಾನಾಜಿ ಪಾಟೀಲ್, ಗ್ರಾ.ಪಂ. ಅಧ್ಯಕ್ಷೆ ಯಶೋಧಾಬಾಯಿ ಸಂತೋಷ, ಗ್ರಾಮ ಲೆಕ್ಕಿಗ ಮಹಾಳಪ್ಪಾ, ಗ್ರಾ.ಪಂ ಸದಸ್ಯ ಅನೀಲಕುಮಾರ್ ಬಿರಾದಾರ್, ಭಾನುದಾಸ್ ಮುಳೆ, ಪಂಢರಿ ವರವಟ್ಟೆ, ಸತೀಶ್ ದೇಶಮುಖ, ಕಿಶೋರ್ ಪಾಟೀಲ್, ಸಂತೋಷ್ ಜಾಧವ್ ಹಾಗೂ ಅನಂತ ಸೇರಿದಂತೆ ಅನೇಕರು ಇದ್ದರು.