ಬೀದರ್ ವಿಮಾನಯಾನಕ್ಕೆ ಪ್ರಸಕ್ತ ವರ್ಷಕ್ಕೆ 14 ಕೋಟಿ ರೂ. ಮೀಸಲು: ಸಚಿವ ಈಶ್ವರ್ ಖಂಡ್ರೆ

Update: 2025-04-13 22:11 IST
ಬೀದರ್ ವಿಮಾನಯಾನಕ್ಕೆ ಪ್ರಸಕ್ತ ವರ್ಷಕ್ಕೆ 14 ಕೋಟಿ ರೂ. ಮೀಸಲು: ಸಚಿವ ಈಶ್ವರ್ ಖಂಡ್ರೆ
  • whatsapp icon

ಬೀದರ್ : ಕೇಂದ್ರ ಸರ್ಕಾರ ಉಡಾನ್ ಸಬ್ಸಿಡಿ ನಿಲ್ಲಿಸಿದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ನಾಗರಿಕ ವಿಮಾನಯಾನ ಪುನರ್ ಆರಂಭಿಸಲು ಕೆಕೆಆರ್‌ಡಿಬಿಯಿಂದ ಈ ವರ್ಷ 14 ಕೋಟಿ ರೂ. ಮೀಸಲಿಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಏ.16ರಂದು ಸಂಜೆ 4 ಗಂಟೆಗೆ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಮಾನ ನಿಲ್ದಾಣದ ಹೊರಗೆ ನಡೆಯುವ ಕಾರ್ಯಕ್ರಮದಲ್ಲಿ ಬೀದರ್‌ ನಿಂದ ಬೆಂಗಳೂರಿಗೆ ತೆರಳಲಿರುವ ಆಯ್ದ 5 ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ವಿತರಿಸುವ ಮೂಲಕ ನಾಗರಿಕ ವಿಮಾನಯಾನ ಸೇವೆಯ ಪುನಾರಂಭಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಕರುನಾಡಿಗೆ ಕಿರೀಟ ಪ್ರಾಯವಾಗಿರುವ ಬೀದರ್ ಜಿಲ್ಲೆ, ಸರ್ವಧರ್ಮ ಸಮನ್ವಯದ ನಾಡು. ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಬಸವಕಲ್ಯಾಣದ ಅನುಭವ ಮಂಟಪ, ಝರಣಿ ನರಸಿಂಹಸ್ವಾಮಿ ಕ್ಷೇತ್ರ, ಪಾಪನಾಶ್, ನಾನಕ್ ಝೀರಾ ಗುರುದ್ವಾರ, ಮಹಮದ್ ಗವಾನ್ ಮದರಸಾ ಹಾಗೂ ಮೆಥೋಡಿಸ್ಟ್ ಚರ್ಚ್ ಇದೆ. ಈಗ ಹೊನ್ನಿಕೇರಿ ಅರಣ್ಯ ಪ್ರದೇಶವನ್ನು ಪರಿಸರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸುತ್ತಿದ್ದು, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಹೀಗಾಗಿ ಈ ವಿಮಾನಯಾನ ಸೇವೆ ಮುಂದಿನ ದಿನಗಳಲ್ಲಿ ದೇಶ ವಿದೇಶಗಳ ಪ್ರವಾಸಿಗರಿಗೆ ನೆರವಾಗಲಿದೆ ಎಂದರು.

2025 ಕೋಟಿ ರೂ. ಮೌಲ್ಯದ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆ

ಜಿಲ್ಲೆಯಲ್ಲಿ ಸುಮಾರು 200 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಹಲವು ಕಾಮಗಾರಿ ಪೂರ್ಣಗೊಂಡಿದ್ದು, ಈ ಪೈಕಿ 10 ಕಾಮಗಾರಿ ಮತ್ತು ಯೋಜನೆಗಳಾದ ಔರಾದ್ ನ ನಾಗೂರ್, ಸಂತಪೂರ್ ನಲ್ಲಿ 114 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ 220 ಕೆ.ವಿ. ಉಪಕೇಂದ್ರಗಳ ಉದ್ಘಾಟನೆ, ಬೀದರ್ ನಗರಸಭೆ ಮತ್ತು ಭಾಲ್ಕಿ ಪುರಸಭೆ ವ್ಯಾಪ್ತಿಯಲ್ಲಿ 49 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳು, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಭಾಲ್ಕಿಯಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ 400 ಮನೆಗಳ ಹಸ್ತಾಂತರ, ಬ್ರಿಮ್ಸ್ ನಲ್ಲಿ 15.11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಹೃದ್ರೋಗ ಚಿಕಿತ್ಸಾ ಘಟಕ ಮತ್ತು ಕ್ಯಾಥ್ ಲ್ಯಾಬ್ ಅಲ್ಲದೇ ವಿದ್ಯಾರ್ಥಿ ನಿಲಯ, ಅಂಗನವಾಡಿ ಕೇಂದ್ರ, ಶಾಲೆ ಮತ್ತು ಆರೋಗ್ಯ ಕೇಂದ್ರ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಹಾಗೆಯೇ ಭಾಲ್ಕಿ ತಾಲ್ಲೂಕಿನ ಮೆಹಕರ್ ಏತ ನೀರಾವರಿ ಯೋಜನೆ ಹಾಗೂ ಔರಾದ್ ತಾಲ್ಲೂಕಿನಲ್ಲಿನ 36 ಕೆರೆ ತುಂಬಿಸುವ ಯೋಜ, ಬಗದಲ್ ಹಾಗೂ ಇತರ 104 ಜನವಸತಿ ಮತ್ತು ಚಿಟಗುಪ್ಪಾ ತಾಲ್ಲೂಕಿನ ಮನ್ನಾಖೇಳಿ ಹಾಗೂ 32 ಜನ ವಸತಿಗಳಿಗೆ 330 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ, ಬೀದರ್ ನಗರಸಭೆ, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್, ಚಿಟಗುಪ್ಪ ಮತ್ತು ಔರಾದ್ ಪುರಸಭೆ ವ್ಯಾಪ್ತಿಯಲ್ಲಿ ಜಲಮೂಲಗಳ ಪುನಶ್ಚೇತನ ಮತ್ತು ಉದ್ಯಾನ ಅಭಿವೃದ್ಧಿ, ಹುಮನಾಬಾದ್ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಉನ್ನತೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ವಾಸ್ತವವಾಗಿ 2,400 ಕೋಟಿ ರೂ.ಗೂ ಅಧಿಕ ಮೌಲ್ಯದ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರುತ್ತಿದೆ. ಆದರೆ ಇದು 2025ನೇ ಇಸವಿ ಆಗಿರುವ ಹಿನ್ನೆಲೆಯಲ್ಲಿ 2025 ಕೋಟಿ ರೂ. ಯೋಜನೆಗಳನ್ನು ಘೋಷಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಎ.16ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರುಗಳಾದ ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ವೆಂಕಟೇಶ್, ಎನ್.ಎಸ್. ಬೋಸರಾಜ್, ಝಮೀರ್ ಅಹ್ಮದ್ ಖಾನ್, ರಹೀಮ್ ಖಾನ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್, ಸಂಸತ್ ಸದಸ್ಯ ಸೇರಿದಂತೆ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಗೋಷ್ಠಿಯಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸೇರಿದಂತೆ ಇನ್ನು ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News